ನವದೆಹಲಿ : ಪಂಚಕುಲ ಮೂಲದ ವಿಶೇಷ ನ್ಯಾಯಾಧೀಶರೊಬ್ಬರಿಗೆ ಲಂಚ ನೀಡಿದ ಆರೋಪಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ರಿಯಲ್ ಎಸ್ಟೇಟ್ ಸಂಸ್ಥೆ IREO ಮಾಲೀಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಲಲಿತ್ ಗೋಯಲ್ ಅವರನ್ನು ಬಂಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್ಎ) ಕ್ರಿಮಿನಲ್ ವಿಭಾಗಗಳ ಅಡಿಯಲ್ಲಿ IREO ಮಾಲೀಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಲಲಿತ್ ಗೋಯಲ್ ಅವರನ್ನು ಫೆಡರಲ್ ತನಿಖಾ ಸಂಸ್ಥೆ ಗುರುಗ್ರಾಮ್ ನಲ್ಲಿ ವಶಕ್ಕೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಇಡಿ ಅವರನ್ನು ರಿಮಾಂಡ್ ಕೋರಿ ಇಂದು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ.
ಪಂಚಕುಲದಲ್ಲಿ ನೇಮಕಗೊಂಡಿದ್ದ ಸಿಬಿಐ-ಇಡಿ ಮಾಜಿ ವಿಶೇಷ ನ್ಯಾಯಾಧೀಶ ಸುಧೀರ್ ಪರ್ಮಾರ್, ಅವರ ಸೋದರಳಿಯ ಅಜಯ್ ಪರ್ಮಾರ್ ಮತ್ತು ಮತ್ತೊಂದು ರಿಯಾಲ್ಟಿ ಗ್ರೂಪ್ ಎಂ 3 ಎಂನ ಪ್ರವರ್ತಕ ರೂಪ್ ಕುಮಾರ್ ಬನ್ಸಾಲ್ ಮತ್ತು ಇತರರ ವಿರುದ್ಧ ಹರಿಯಾಣ ಪೊಲೀಸರ ಭ್ರಷ್ಟಾಚಾರ ನಿಗ್ರಹ ಬ್ಯೂರೋ ಏಪ್ರಿಲ್ ನಲ್ಲಿ ಎಫ್ಐಆರ್ ದಾಖಲಿಸಿದೆ.