ಕೋಲ್ಕತ್ತಾ: ಈ ತಿಂಗಳ ಆರಂಭದಲ್ಲಿ 32 ವರ್ಷದ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ, ಕೊಲೆ ನಡೆದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರ ಸದಸ್ಯತ್ವವನ್ನು ಭಾರತೀಯ ವೈದ್ಯಕೀಯ ಸಂಘ(ಐಎಂಎ) ಬುಧವಾರ ಅಮಾನತುಗೊಳಿಸಿದೆ.
ಮಹಿಳಾ ವೈದ್ಯರೊಂದಿಗೆ ಅನುಚಿತ ವರ್ತನೆಯ ಆರೋಪದ ನಂತರ, ಆಸ್ಪತ್ರೆಯಲ್ಲಿ ಘೋಷ್ ಅವರ ವರ್ತನೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿದ್ದು ಅಮಾನತುಗೊಳಿಸಲಾಗಿದೆ. ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಿಬಿಐ ತನಿಖೆಯ ನಡುವೆಯೇ ಅಮಾನತು ಮಾಡಲಾಗಿದೆ.
IMA ಕೋಲ್ಕತ್ತಾ ಶಾಖೆಯ ಉಪಾಧ್ಯಕ್ಷರೂ ಆಗಿರುವ ಘೋಷ್ ಅವರ ಐಎಂಎ ಸದಸ್ಯತ್ವವನ್ನು ಅಮಾನತುಗೊಳಿಸಲು ಐಎಂಎ ರ ಶಿಸ್ತು ಸಮಿತಿ ನಿರ್ಧಾರ ಕೈಗೊಂಡಿದೆ. ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ.ಆರ್.ವಿ. ಅಶೋಕನ್ ರಚಿಸಿದ ಸಮಿತಿಯು ಸ್ನಾತಕೋತ್ತರ ನಿವಾಸಿ ವೈದ್ಯರ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮತ್ತು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಂತರದ ಬೆಳವಣಿಗೆಗಳನ್ನು ಪರಿಶೀಲಿಸಿದೆ ಎಂದು ಐಎಂಎ ತಿಳಿಸಿದೆ.
ಐಎಂಎ ಬೆಂಗಾಲ್ ರಾಜ್ಯ ಶಾಖೆ ಮತ್ತು ವೈದ್ಯರ ಕೆಲವು ಸಂಘಗಳು ಸಹ ವೃತ್ತಿಗೆ ಅಪಖ್ಯಾತಿ ತಂದಿರುವ ಘೋಷ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿವೆ. IMA ಶಿಸ್ತು ಸಮಿತಿಯು ಭಾರತೀಯ ವೈದ್ಯಕೀಯ ಸಂಘದ ಸದಸ್ಯತ್ವದಿಂದ ತಕ್ಷಣವೇ ಅಮಾನತುಗೊಳಿಸಲು ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.