ಬೆಂಗಳೂರು : ಬಿಜೆಪಿ-ಜೆಡಿಎಸ್ ಪಿತೂರಿಗೆ ಹೆದರಿ ನಾನು ರಾಜೀನಾಮೆ ಕೊಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕದ ಜನ, ಪಕ್ಷ, ಶಾಸಕರು, ಸಂಸದರು ನನ್ನ ಜೊತೆಗಿದ್ದಾರೆ. ನಾನು ಕಾನೂನು ಹೋರಾಟ ಮುಂದುವರೆಸುತ್ತೇನೆ ಎಂದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಬಿಜೆಪಿ-ಜೆಡಿಎಸ್ ಪಿತೂರಿಗೆ ಹೆದರಿ ನಾನು ರಾಜೀನಾಮೆ ಕೊಡಲ್ಲ, ಬಿಜೆಪಿ-ಜೆಡಿಎಸ್ ಸಂಚು ನಡೆಸುತ್ತಿದೆ, ಕಾಂಗ್ರೆಸ್ ಹೈಕಮಾಂಡ್ ನನ್ನ ಜೊತೆ ಇದೆ. ಕಾನೂನು ಹೋರಾಟಕ್ಕೆ ಅವರು ಸಲಹೆ ನೀಡಿದ್ದಾರೆ ಎಂದರು. ಪ್ರಾಸಿಕ್ಯೂಷನ್ ಗೆ ಹೈಕೋರ್ಟ್ ಆದೇಶ ನೀಡಿಲ್ಲ, ಪ್ರಾಥಮಿಕ ತನಿಖೆಗೆ ಮಾತ್ರ ಅನುಮತಿ ನೀಡಿದೆ ಎಂದರು.
ಬಿಜೆಪಿ-ಜೆಡಿಎಸ್ ಬಡವರ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಲೇ ಬಂದಿದೆ. ಗ್ಯಾರಂಟಿ ಯೋಜನೆಗಳನ್ನು ಸಹಿಸಲು ಆಗದೇ ಈ ಸಂಚು ರೂಪಿಸಿದೆ. ನರೇಂದ್ರ ಮೋದಿ ಸರ್ಕಾರದಿಂದ ಸೇಡಿನ ರಾಜಕಾರಣ ನಡೆಯುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದೆ. ದೇಶದಲ್ಲಿರುವ ವಿಪಕ್ಷ ಸರ್ಕಾರ ಗಳ ವಿರುದ್ಧ ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ನಡೆಸುತ್ತಿದೆ ಎಂದು ಕಿಡಿಕಾರಿದರು.
ತಜ್ಞರ ಜೊತೆ ಸಮಾಲೋಚನೆ
ನ್ಯಾಯಾಲಯವು ಸೆಕ್ಷನ್ 218 ರ ಅಡಿ ರಾಜ್ಯಪಾಲರು ನೀಡಿದ ಅಭಿಯೋಜನೆಯನ್ನು ನ್ಯಾಯಾಲಯ ಸಂಪೂರ್ಣವಾಗಿ ತಿರಸ್ಕರಿಸಿದೆ. ರಾಜ್ಯಪಾಲರ ಆದೇಶದಲ್ಲಿನ ಸೆಕ್ಷನ್ 17ಎ ಗೆ ಮಾತ್ರ ನ್ಯಾಯಮೂರ್ತಿಗಳು ಸೀಮಿತಗೊಳಿಸಿದ್ದಾರೆ. ನಾನು ಯಾವುದೇ ತನಿಖೆಗೆ ಹಿಂಜರಿಯುವುದಿಲ್ಲ. ಕಾನೂನಿನ ಅಡಿ ಅಂತಹ ತನಿಖೆಗೆ ಅವಕಾಶ ಇದೆಯೋ ಇಲ್ಲವೋ ಎಂಬ ಬಗ್ಗೆ ತಜ್ಞರ ಜೊತೆ ಸಮಾಲೋಚಿಸುತ್ತೇನೆ. ಕಾನೂನು ತಜ್ಞರ ಜೊತೆ ಚರ್ಚಿಸಿ ಹೋರಾಟದ ರೂಪುರೇಷೆ ನಿರ್ಧರಿಸುತ್ತೇನೆ ಎಂದರು.
ಈ ರಾಜಕೀಯ ಹೋರಾಟದಲ್ಲಿ ರಾಜ್ಯದ ಜನ ನನ್ನ ಹಿಂದೆ ಇದ್ದಾರೆ. ಅವರ ಆಶೀರ್ವಾದವೇ ನನಗೆ ಶ್ರೀರಕ್ಷೆ. ಕಾನೂನು ಮತ್ತು ಸಂವಿಧಾನದಲ್ಲಿ ನನಗೆ ನಂಬಿಕೆ ಇದೆ. ಈ ಹೋರಾಟದಲ್ಲಿ ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ. ಇದು ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರದ ಸೇಡಿನ ರಾಜಕೀಯದ ವಿರುದ್ಧದ ಹೋರಾಟ. ಬಿಜೆಪಿ, ಜೆಡಿಎಸ್ ನ ಈ ಸೇಡಿನ ರಾಜಕೀಯದ ವಿರುದ್ಧ ನಮ್ಮ ನ್ಯಾಯಾಂಗದ ಹೋರಾಟ ಮುಂದುವರಿಯಲಿದೆ. ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ ಎಂದರು.