ಬೆಂಗಳೂರು : ಸಂವಿಧಾನ ಬದಲಾವಣೆ ಮಾಡುವುದಾಗಿ ನಾನು ಎಲ್ಲಿಯೂ ಹೇಳಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿದ ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ”ಸಂವಿಧಾನ ಬದಲಾವಣೆ ಮಾಡುವುದಾಗಿ ನಾನು ಎಲ್ಲಿಯೂ ಹೇಳಿಲ್ಲ. ಕಳೆದ 36 ವರ್ಷಗಳಿಂದ ಶಾಸಕನಾಗಿ ವಿಧಾನಸಭೆಯಲ್ಲಿದ್ದೇನೆ. ನನಗೂ ಸಾಮಾನ್ಯ ಜ್ಞಾನವಿದೆ. ಇಂತಹ ವಿಚಾರದಲ್ಲಿ ಜೆ.ಪಿ.ನಡ್ಡಾ ಅವರಿಗಿಂತಲೂ ನಾನು ಉತ್ತಮ ಸೂಕ್ಷ್ಮತೆ ಇರುವ ರಾಜಕಾರಣಿ. ಆದರೆ ಬಿಜೆಪಿ ಜನಸಾಮಾನ್ಯರ ದಾರಿ ತಪ್ಪಿಸುತ್ತಿದೆ. ಸುಳ್ಳು ಹೇಳಿಕೆ ಸೃಷ್ಟಿಸಿ, ನನ್ನ ಹೆಸರನ್ನು ಎಳೆದು ತರಲಾಗುತ್ತಿದೆ. ನಾನು ಈ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿಲ್ಲ”.
”ನ್ಯಾಯಾಲಯಗಳ ತೀರ್ಪಿನ ಅನುಸಾರ ತಿದ್ದುಪಡಿ ತಂದಿರುವ ನಿದರ್ಶನವಿದೆ ಎಂದು ಹೇಳಿದ್ದೇನೆಯೇ ಹೊರತು, ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ನನ್ನ ಹೇಳಿಕೆಯನ್ನು ತಿರುಚಿರುವ ಬಗ್ಗೆ ಕಾನೂನು ಹೋರಾಟ ಮಾಡುತ್ತೇನೆ. ನಮ್ಮದು ರಾಷ್ಟ್ರೀಯ ಪಕ್ಷ, ಸಂವಿಧಾನವನ್ನು ಜಾರಿಗೆ ತಂದಿದ್ದೇ ನಮ್ಮ ಪಕ್ಷ. ಸಂವಿಧಾನದ ಮಹತ್ವ ಬೇರೆಲ್ಲರಿಗಿಂತ ನಮಗೆ ಚೆನ್ನಾಗಿ ಗೊತ್ತಿದೆ”.
”ಕೇಂದ್ರ ಸರ್ಕಾರ ತನ್ನ ಬಜೆಟ್ ನಲ್ಲಿ ವಿಫಲವಾಗಿದೆ. ಬಜೆಟ್ ನಲ್ಲಿ ಏನೂ ಇಲ್ಲದೇ ಇರುವ ಕಾರಣಕ್ಕೆ ಬಿಜೆಪಿ ಈ ರೀತಿ ಇಲ್ಲಸಲ್ಲದ ವಿಚಾರವನ್ನು ಪ್ರಸ್ತಾವ ಮಾಡುತ್ತಿದೆ. ಇದೊಂದು ನನ್ನ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಮುಂದುವರೆದಿರುವ ರಾಜಕೀಯ ಪಿತೂರಿ.”
”ಅಮಿತ್ ಮಾಳವಿಯಾ ಓರ್ವ ರಾಜಕಾರಣಿಯಾಗಿ ಇಡೀ ದೇಶವನ್ನು ತಪ್ಪು ಹಾದಿಗೆ ಎಳೆಯುತ್ತಿದ್ದಾರೆ. ಬಿಜೆಪಿ ಯಾವಾಗಲೂ ದೇಶವನ್ನು ತಪ್ಪು ಹಾದಿಗೆ ಎಳೆಯುವ ಕೆಲಸ ಮಾಡುತ್ತಲೇ ಬಂದಿದೆ. ನಾನು ಎಲ್ಲಿ ಸಂವಿಧಾನ ಬದಲಾವಣೆ ಮಾಡುತ್ತೇನೆ ಎಂದು ಹೇಳಿದ್ದೇನೆ ಎಂದು ತೋರಿಸಲಿ. ಬಿಜೆಪಿಯವರು ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ನನ್ನ. ಸೋನಿಯಾ ಗಾಂಧಿ ಅವರ ಕುಟುಂಬದ ಹಾಗೂ ಕಾಂಗ್ರೆಸ್ ಪಕ್ಷದ ಹೆಸರು ತೆಗೆದುಕೊಳ್ಳದಿದ್ದರೆ ನಿದ್ದೆ ಬರುವುದಿಲ್ಲ”.
”ಇದೆಲ್ಲವೂ ಹುಚ್ಚುತನ, ಮೂರ್ಖತನ. ಇದು ಕಾಂಗ್ರೆಸ್ ಪಕ್ಷ ಹಾಗೂ ನನ್ನ ವಿರುದ್ಧದ ರಾಜಕೀಯ ಪಿತೂರಿ. ಸಂಸತ್ ಒಳಗೆ ಈ ಹೇಳಿಕೆ ನೀಡಿದ್ದರೆ ಕಾನೂನು ಹೋರಾಟ ಕಷ್ಟ. ಹೊರಗೆ ನೀಡಿದ್ದರೆ ಹೋರಾಟದ ಬಗ್ಗೆ ವಿಚಾರ ಮಾಡುತ್ತೇನೆ.”
”ಬಿಜೆಪಿ ಕೆಲಸವೇ ನಕಲಿ ಹಾಗೂ ಸುಳ್ಳು ಸುದ್ದಿಗಳನ್ನು ಪಸರಿಸುವುದು. ಇದರಲ್ಲಿ ಅವರದು ಎತ್ತಿದ ಕೈ. ನಾವು ಈ ದೇಶಕ್ಕೆ ಸಂವಿಧಾನ ನೀಡಿದವರು. ಅದನ್ನು ಕಾಪಾಡುವುದು ನಮ್ಮ ಹಕ್ಕು. ಬಿಜೆಪಿಯು ತನ್ನ ಲೋಪಗಳನ್ನು ಮುಚ್ಚಿಕೊಳ್ಳಲು ಇಂತಹ ಸುಳ್ಳು ವಿಚಾರಗಳನ್ನು ಮುನ್ನೆಲೆಗೆ ತರುತ್ತಿದೆ ಎಂದಿದ್ದಾರೆ”.
ಸಂವಿಧಾನ ಬದಲಾವಣೆ ಮಾಡುವುದಾಗಿ ನಾನು ಎಲ್ಲಿಯೂ ಹೇಳಿಲ್ಲ!#JaiSamvidhan pic.twitter.com/BMlEOUCq1x
— DK Shivakumar (@DKShivakumar) March 24, 2025