ಬೆಂಗಳೂರು : ದೇಶವಿಭಜನೆ ಬಗ್ಗೆ ನಾನು ಹೇಳಿಲ್ಲ ಎಂದು ಸಂಸದ ಡಿಕೆ ಸುರೇಶ್ ( D.K Suresh ) ಯೂ ಟರ್ನ್ ಹೊಡೆದಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಡಿಕೆ ಸುರೇಶ್ ‘ನನ್ನ ಹೇಳಿಕೆಯನ್ನು ಬಿಜೆಪಿಯವರು ತಿರುಚುತ್ತಿದ್ದಾರೆ,: ದೇಶವಿಭಜನೆ ಬಗ್ಗೆ ನಾನು ಹೇಳಿಲ್ಲ. ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ, ಹೋರಾಟ ಮಾಡಲು ಎಲ್ಲರಿಗೂ ಹಕ್ಕಿದೆ. ಬಿಜೆಪಿ ಹೋರಾಟಕ್ಕೆ ನನ್ನ ಸಹಕಾರವಿದೆ, ಅವರಿಗೆ ದೇವರು ಒಳ್ಳೆಯದು ಮಾಡಲಿ’ ಎಂದು ಸಂಸದ ಡಿಕೆ ಸುರೇಶ್ ಯೂ ಟರ್ನ್ ಹೊಡೆದಿದ್ದಾರೆ.
ದೇಶ ವಿಭಜನೆ ಹೇಳಿಕೆ ನೀಡಿರುವ ಸಂಸದ ಡಿ.ಕೆ.ಸುರೇಶ್ ವಿರುದ್ಧ ಬಿಜೆಪಿ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ ಕಾರ್ಯಕರ್ತರು ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟನೆ ತೀವ್ರಗೊಳಿಸಿದ್ದು, ಸಂಸದರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.ಬೆಂಗಳೂರಿನ ಸದಾಶಿವನಗರದಲ್ಲಿರುವ ಸಂಸದ ಡಿ.ಕೆ.ಸುರೇಶ್ ನಿವಾಸದ ಬಳಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಡಿ.ಕೆ.ಸುರೇಶ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಿಜೆಪಿಯ ಹಲವು ಕಾರ್ಯಕರ್ತರನ್ನು ಪೊಲೀಸರು ಬಸ್ ಗಳಲ್ಲಿ ತುಂಬಿ ಕರೆದೊಯ್ದಿದ್ದಾರೆ.
ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ‘ಪ್ರತ್ಯೇಕ ರಾಷ್ಟ್ರ’ ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ ಒಂದು ದಿನದ ನಂತರ, ಬಿಜೆಪಿ ಈ ವಿಷಯವನ್ನು ಸಂಸತ್ತಿನ ಉಭಯ ಸದನಗಳಲ್ಲಿ ಎತ್ತಿದೆ .ಕಾಂಗ್ರೆಸ್ ಕ್ಷಮೆಯಾಚಿಸಬೇಕು ಮತ್ತು ನೈತಿಕ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಅನ್ನು ಟೀಕಿಸಿದ ಸುರೇಶ್, ಕೇಂದ್ರವು ದಕ್ಷಿಣದ ರಾಜ್ಯಗಳಿಗೆ ಹಣವನ್ನು ನಿರಾಕರಿಸುತ್ತಿದೆ ಎಂದು ಆರೋಪಿಸಿದರು ಮತ್ತು ಈ ಪ್ರವೃತ್ತಿ ಮುಂದುವರಿದರೆ ‘ಪ್ರತ್ಯೇಕ ರಾಷ್ಟ್ರ’ದ ಧ್ವನಿ ಎತ್ತುವುದಾಗಿ ಬೆದರಿಕೆ ಹಾಕಿದ್ದರು.