ಬೆಂಗಳೂರು : ಕರ್ನಾಟಕಕ್ಕೂ HMPV ವೈರಸ್ ಕಾಲಿಟ್ಟಿದೆ ಎನ್ನಲಾಗಿದ್ದು, ಬೆಂಗಳೂರಲ್ಲಿ 8 ತಿಂಗಳ ಮಗುವಿನಲ್ಲಿ ಸೋಂಕು ಪತ್ತೆಯಾಗಿದೆ.
ಈ ಹಿನ್ನೆಲೆ ರಾಜ್ಯದಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಚಿವ ದಿನೇಶ್ ಗುಂಡೂರಾವ್ ತುರ್ತು ಸಭೆ ಕರೆದಿದ್ದಾರೆ. ಇಂದು ಬೆಳಗ್ಗೆ 12:30 ಕ್ಕೆ ಸಚಿವರು ಸಭೆ ಕರೆದಿದ್ದು, ವೈರಸ್ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಲಿದ್ದಾರೆ. ವೈರಸ್ ಬಗ್ಗೆ ಜಾಗೃತಿ ವಹಿಸಲು ಮಾರ್ಗಸೂಚಿ ಹೊರಡಿಸುವ ಸಾಧ್ಯತೆಯಿದೆ.
ಮಗುವಿಗೆ ಜ್ವರ ಬಂದ ಹಿನ್ನೆಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈ ವೇಳೆ ಮಗುವಿಗೆ ರಕ್ತ ಪರೀಕ್ಷೆ ಮಾಡಿಸಿದಾಗ ಹೆಚ್ ಎಂಪಿವಿ ವೈರಸ್ ಇರುವುದು ಧೃಡವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಚೀನಾದಲ್ಲಿ HMPV ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಇದು ಕೋವಿಡ್-19 ನಂತಹ ಗಂಭೀರ ಪರಿಸ್ಥಿತಿಗೆ ಕಾರಣವಾಗುತ್ತಿಲ್ಲ ಎಂದು ತಜ್ಞರು ಹೇಳಿದ್ದಾರೆ. ಆದರೂ, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಎಚ್ಚರಿಕೆ ವಹಿಸುವುದು ಮುಖ್ಯವಾಗಿದೆ. ಚೀನಾದಲ್ಲಿ ಇದುವರೆಗೆ 300 ಕ್ಕೂ ಹೆಚ್ಚು ಮಂದಿ ಈ ಸೋಂಕಿಗೆ ತುತ್ತಾಗಿದ್ದಾರೆ. ಈ ಹಿನ್ನೆಲೆ ಭಾರತಕ್ಕೂ ಆತಂಕ ಶುರುವಾಗಿದೆ.