ಬೆಂಗಳೂರು : ರಾಜ್ಯದ ಜನತೆಗೆ ನೆಮ್ಮದಿ ಸುದ್ದಿ ಎಂಬಂತೆ ಸದ್ಯಕ್ಕೆ ನಂದಿನಿ ಹಾಲಿನ ( Nandini Milk) ದರ ಏರಿಕೆ ಇಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು ನಂದಿನಿ ಹಾಲಿನ ದರ ಏರಿಕೆ ಮಾಡುವಂತೆ ರಾಜ್ಯದ ರೈತರು ಬೇಡಿಕೆ ಇಟ್ಟಿದ್ದಾರೆ.
ಸದ್ಯಕ್ಕೆ ನಂದಿನಿ ಹಾಲಿನ ದರ ಏರಿಕೆ ಇಲ್ಲ,ಹಾಲಿನ ದರ ಏರಿಕೆಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ, ಈ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದರು. ಕೆಎಂಎಫ್ ಎಂಡಿ ವರ್ಗಾವಣೆಯಾಗಿದೆ, ಅದು ಆಡಳಿತಾತ್ಮಕ ನಿರ್ಧಾರವಾಗಿದೆ ಎಂದರು.
ರಾಜ್ಯದಲ್ಲಿ ಮತ್ತೊಮ್ಮೆ ಹಾಲಿನ ದರ ಹೆಚ್ಚಳ ಮಾಡಲು ನಿರ್ಧರಿಸಿದ್ದು, ಶೀಘ್ರವೇ ಸಭೆ ಕರೆಯಲಾಗುವುದು. ಹೆಚ್ಚಳ ಮಾಡಿದ ದರವನ್ನು ರೈತರಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದರು. ಹಾಲಿನ ದರ ಹೆಚ್ಚಳದ ಜೊತೆಗೆ ಡೇರಿಗಳಿಗೆ ಪ್ರತಿ ಲೀಟರ್ ಹಾಲಿಗೆ 20 ಪೈಸೆ ಕೊಡುವಂತೆ ಒಕ್ಕೂಟದವರು ಕೇಳುತ್ತಿದ್ದು, ಈ ಸಂಬಂಧ ಕೆಎಂಎಫ್ ಹಾಗೂ ಹಾಲು ಒಕ್ಕೂಟಗಳ ಅಧ್ಯಕ್ಷರ ಸಭೆ ಕರೆದು ಚರ್ಚಿಸಿ ತೀರ್ಮಾನ ಮಾಡುವುದಾಗಿ ಸಿಎಂ ತಿಳಿಸಿದ್ದರು.ಕಳೆದ ಜೂನ್ ನಲ್ಲಿ ಹಾಲಿನ ಪ್ರಮಾಣ ಹೆಚ್ಚಳ ಮಾಡಿ ಪ್ರತಿ ಲೀಟರ್ ಹಾಲಿನ ದರ ಎರಡು ರೂಪಾಯಿಯಷ್ಟು ಹೆಚ್ಚಳ ಮಾಡಲಾಗಿತ್ತು.