ಚೆನ್ನೈ: ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಎನ್.ಶಂಕರಯ್ಯ ಅವರು ಬುಧವಾರ ಚೆನ್ನೈನಲ್ಲಿ ನಿಧನರಾದರು.
ಅವರಿಗೆ 102 ವರ್ಷ ವಯಸ್ಸಾಗಿತ್ತು. ಜ್ವರ, ಶೀತ ಮತ್ತು ಕಡಿಮೆ ಆಮ್ಲಜನಕದ ಸ್ಯಾಚುರೇಶನ್ ಹಿನ್ನೆಲೆ ಸೋಮವಾರದಿಂದ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
1921ರಲ್ಲಿ ತೂತುಕುಡಿಯಲ್ಲಿ ಜನಿಸಿದ ಶಂಕರಯ್ಯನವರು ಮಧುರೈನ ಅಮೆರಿಕನ್ ಕಾಲೇಜಿನಲ್ಲಿ ಇತಿಹಾಸವನ್ನು ಅಧ್ಯಯನ ಮಾಡಿದರು. ಅವರು ಸುದೀರ್ಘ ಮತ್ತು ಪ್ರಸಿದ್ಧ ರಾಜಕೀಯ ವೃತ್ತಿಜೀವನವನ್ನು ಹೊಂದಿದ್ದರು. ಅವರು ಎಂಟು ವರ್ಷಗಳನ್ನು ಜೈಲಿನಲ್ಲಿ ಕಳೆದರು. 1947ರ ಆಗಸ್ಟ್ ನಲ್ಲಿ ಭಾರತದ ಸ್ವಾತಂತ್ರ್ಯದ ಮುನ್ನಾದಿನದಂದು ಬಿಡುಗಡೆಗೊಂಡ ಕಮ್ಯುನಿಸ್ಟರಲ್ಲಿ ಅವರೂ ಒಬ್ಬರಾಗಿದ್ದರು. 1995ರಿಂದ 2002ರವರೆಗೆ ತಮಿಳುನಾಡು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿಯಾಗಿದ್ದರು. ಶಂಕರಯ್ಯ ಅವರು ಮಧುರೈ ಪಶ್ಚಿಮ ಕ್ಷೇತ್ರವನ್ನು ಪ್ರತಿನಿಧಿಸುವ ವಿಧಾನಸಭೆಗೆ ಮೂರು ಬಾರಿ ಆಯ್ಕೆಯಾಗಿದ್ದರು.