ನವದೆಹಲಿ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಎಲ್ಲಾ ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಗುರುವಾರ ಹೇಳಿದ್ದು, ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಫಾರೂಕ್ ಅಬ್ದುಲ್ಲಾ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ಮಾತುಕತೆ ವಿಫಲವಾದ ಹಿನ್ನೆಲೆ ನ್ಯಾಷನಲ್ ಕಾನ್ಫರೆನ್ಸ್ ಇತರ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದೆ ಅದರ ಅರ್ಹತೆಯ ಆಧಾರದ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದರು. ಆದರೆ ಮತ್ತೆ ಎನ್ಡಿಎ ತೆಕ್ಕೆಗೆ ಮರಳುವ ಸಾಧ್ಯತೆಯನ್ನು ತಳ್ಳಿಹಾಕಲಿಲ್ಲ.
ಇಂಡಿಯಾ ಬಣ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಡುವಿನ ಬಿರುಕುಗಳು ಕಳೆದ ತಿಂಗಳಿನಿಂದಲೇ ಗೋಚರಿಸುತ್ತಿವೆ. ಸೀಟು ಹಂಚಿಕೆ ಸೂತ್ರವನ್ನು ಶೀಘ್ರದಲ್ಲೇ ನಿರ್ಧರಿಸದಿದ್ದರೆ ಕೆಲವು ವಿರೋಧ ಪಕ್ಷಗಳು ಪ್ರತ್ಯೇಕ ಮೈತ್ರಿಕೂಟವನ್ನು ರಚಿಸಬಹುದು ಎಂದು ಮಾಜಿ ಸಿಎಂ ಜನವರಿಯಲ್ಲಿ ಹೇಳಿದ್ದರು.
ಕಳೆದ ತಿಂಗಳು, ಜಮ್ಮು ಪ್ರದೇಶದ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ನ ಹಲವಾರು ಉನ್ನತ ನಾಯಕರು ಬಿಜೆಪಿಗೆ ಸೇರಿದರು.2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಅಬ್ದುಲ್ಲಾ ಅವರ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ತಲಾ ಮೂರು ಸ್ಥಾನಗಳನ್ನು ಗೆದ್ದಿವೆ.