ಬೆಂಗಳೂರು : ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಕೊರೊನಾ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸದ್ಯಕ್ಕೆ ರಾಜ್ಯದಲ್ಲಿ ನಿರ್ಬಂಧ ಹೇರುವ ಅಗತ್ಯವಿಲ್ಲ ಎಂದು ಹೇಳಿದರು.
ನೆರೆಯ ಕೇರಳದಲ್ಲಿ ಹೊಸ ಕೋವಿಡ್ ಪ್ರಕರಣಗಳು ಬೆಳಕಿಗೆ ಬರುತ್ತಿರುವ ವರದಿಗಳಿಂದ ಎಚ್ಚೆತ್ತಿಕೊಂಡಿರುವ ಕರ್ನಾಟಕ ಸರ್ಕಾರ ರಾಜ್ಯದಲ್ಲಿನ ಆಸ್ಪತ್ರೆಗಳಲ್ಲಿ ಪೂರ್ವ ಸಿದ್ಧತೆಯನ್ನು ಪರಿಶೀಲಿಸಲು ನಿರ್ಧರಿಸಿದೆ. ಮಂಗಳವಾರ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯನ್ನು ಸರ್ಕಾರ ಕರೆದಿದೆ. ಆರ್ಟಿ-ಪಿಸಿಆರ್ ಪರೀಕ್ಷೆ, ರಾಪಿಡ್ ಆಂಟಿಜೆನ್ ಪರೀಕ್ಷೆ ಮತ್ತು ವಿಟಿಎಂ (ವೈರಲ್ ಟ್ರಾನ್ಸ್ಪೋರ್ಟ್ ಮೀಡಿಯಂ) ಒಳಗೊಂಡಿರುವ ಪರೀಕ್ಷಾ ಕಿಟ್ಗಳನ್ನು ಖರೀದಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಇನ್ನೂ, ಕೇರಳದಲ್ಲಿ ಕೋವಿಡ್ ಉಪತಳಿ JN.1 ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯು ಆತಂಕ ಎದುರಾಗಿದ್ದು, ಗಡಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಮಂಗಳೂರು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಮಂಗಳೂರು, ಮೈಸೂರು, ಚಾಮರಾಜನಗರ ಗಡಿ ಜಿಲ್ಲೆಗಳಲ್ಲಿ ಚೆಕ್ ಪೋಸ್ಟ್ ತೆರೆದು ತಪಾಸಣೆ ನಡೆಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ.