ನವದೆಹಲಿ: ಛತ್ತಿಸ್’ಗಢ ಮಾಜಿ ಸಿಎಂ ‘ಭೂಪೇಶ್ ಬಘೇಲ್’ ಮನೆ ಮೇಲೆ ‘ED’ ದಾಳಿ ನಡೆದಿದೆ.
ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ಭೂಪೇಶ್ ಬಘೇಲ್ ಅವರ ಪುತ್ರ ಚೈತನ್ಯ ಬಘೇಲ್ ಅವರ ಮನೆಯ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಇಂದು (ಮಾರ್ಚ್ 10) ಮುಂಜಾನೆ ದಾಳಿ ನಡೆಸಿದೆ.
ಭಿಲಾಯ್ ನಲ್ಲಿರುವ ಅವರ ನಿವಾಸದಲ್ಲಿ ಈ ದಾಳಿ ನಡೆದಿದೆ. ಛತ್ತೀಸ್ಗಢದಾದ್ಯಂತ 14 ಸ್ಥಳಗಳಲ್ಲಿ ಇಡಿ ದಾಳಿ ನಡೆಸುತ್ತಿದೆ. ಮದ್ಯ ಹಗರಣಕ್ಕೆ ಸಂಬಂಧಿಸಿದ ಹಣಕಾಸು ಅಕ್ರಮಗಳು ಮತ್ತು ಮನಿ ಲಾಂಡರಿಂಗ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಭೂಪೇಶ್ ಬಘೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸುಮಾರು 2161 ಕೋಟಿ ರೂ.ಗಳ ದೊಡ್ಡ ಮದ್ಯ ಹಗರಣ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಈವರೆಗೆ ಹಲವಾರು ಪ್ರಮುಖ ಅಧಿಕಾರಿಗಳು ಮತ್ತು ಮಾಜಿ ಸಚಿವರನ್ನು ಬಂಧಿಸಲಾಗಿದೆ. ಛತ್ತೀಸ್ ಗಢ ಮದ್ಯ ಹಗರಣ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ನಡೆಸುತ್ತಿದೆ. ಭೂಪೇಶ್ ಬಘೇಲ್ 2018 ರಿಂದ 2023 ರವರೆಗೆ ಛತ್ತೀಸ್ಗಢದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಅವರ ನಾಯಕತ್ವದಲ್ಲಿ, ಕಾಂಗ್ರೆಸ್ ಪಕ್ಷವು 2023 ರ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಎದುರಿಸಿತು.