ಬೆಂಗಳೂರು : ನಾಳೆ ಮಾಜಿ ಸಿಎಂ ಡಿ.ವಿ ಸದಾನಂದಗೌಡ ಮಹತ್ವದ ಸುದ್ದಿಗೋಷ್ಟಿ ಕರೆದಿದ್ದು, ಬಹಳ ಕುತೂಹಲ ಮೂಡಿಸಿದೆ.
ಡಿ.ವಿ ಸದಾನಂದಗೌಡ ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಇದರ ನಡುವೆ ಅವರು ಸುದ್ದಿಗೋಷ್ಟಿ ಕರೆದಿದ್ದಾರೆ. ನಾಳೆ ನನ್ನ ಜನ್ಮದಿನ, ಕೆಲವು ಮಹತ್ವದ ನಿರ್ಧಾರಗಳನ್ನು ಹಂಚಿಕೊಳ್ಳುತ್ತೇನೆ, ಯಾವ ನಿರ್ಣಯ ತೆಗೆದುಕೊಳ್ಳುತ್ತೇನೆ ಎಂಬುದನ್ನು ನಾಳೆ ಹೇಳುತ್ತೇನೆ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆ ಹೊತ್ತಲ್ಲೇ ಡಿವಿ ಸದಾನಂದಗೌಡ ಧಿಡೀರ್ ಆಗಿ ಸುದ್ದಿಗೋಷ್ಟಿ ಕರೆದಿದ್ದು, ಸದಾನಂದಗೌಡರ ನಡೆ ಏನು..? ಯಾವ ಕಾರಣಕ್ಕೆ ಸುದ್ದಿಗೋಷ್ಟಿ ಕರೆದಿದ್ದಾರೆ ಎಂಬ ಕುತೂಹಲ ಮೂಡಿದೆ. ನಾಳೆ ಬೆಳಗ್ಗೆ 10:30 ಕ್ಕೆ ಡಿವಿಎಸ್ ಸುದ್ದಿಗೋಷ್ಟಿ ಕರೆದಿದ್ದಾರೆ.
ಕಳೆದ ವಾರವಷ್ಟೇ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ ಡಿವಿಎಸ್
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ನನ್ನೆಲ್ಲಾ ಪ್ರೀತಿಯ ಬಂಧುಗಳೇ, ನನಗೆ ಕಳೆದ ಹತ್ತು ವರ್ಷಗಳ ಕಾಲ ಈ ಕ್ಷೇತ್ರದ ಲೋಕಸಭಾ ಸದಸ್ಯನಾಗಿ, ನಿಮ್ಮ ಕೆಲಸ ಮಾಡುವ ಅವಕಾಶವನ್ನು ಮಾಡಿಕೊಟ್ಟು ಆಶೀರ್ವಾದವನ್ನು ಮಾಡಿದ್ದೀರಿ. ನಾನು ನನ್ನ ಶಕ್ತಿಮೀರಿ ನಿಮ್ಮ ಸೇವೆಯನ್ನು ಮಾಡುವ ಪ್ರಯತ್ನವನ್ನು ಮಾಡಿದ್ದೇನೆ. ನಿಮ್ಮ ಆಶೀರ್ವಾದದಿಂದ ಕೇಂದ್ರದಲ್ಲಿ ನಮ್ಮೆಲ್ಲರ ಪ್ರೀತಿಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜೊತೆಯಲ್ಲಿ 7 ವರ್ಷಗಳ ಕಾಲ ಕ್ಯಾಬಿನೆಟ್ ಮಂತ್ರಿಯಾಗಿ ಕೆಲಸ ಮಾಡುವ ಅವಕಾಶವನ್ನು ಕೂಡ ಕಲ್ಪಿಸಿದ್ದೀರಿ. ನಾನು ನಿಮ್ಮೆಲ್ಲರಿಗೂ ಚಿರಋಣಿ. ನಿಮ್ಮ ಜೊತೆಗೆ ಇನ್ನು ಮುಂದೆಯೂ ಇರುತ್ತೇನೆ. ಎಲ್ಲರಿಗೂ ನನ್ನ ಅಂತರಾಳದ ಹೃದಯ ತುಂಬಿದ ಧನ್ಯವಾದಗಳು ಎಂದು ಪೋಸ್ಟ್ ಮಾಡಿದ್ದರು.