ಉತ್ತರ ಪ್ರದೇಶ : ಕೋಟ್ಯಾಂತರ ಭಕ್ತರ ಕನಸು ನನಸಾಗಿದ್ದು, ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ್ದಾರೆ.
ಅಯೋಧ್ಯೆ ನೂತನ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿತು. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸಮಸ್ತ ಜನತೆಯ ಪರವಾಗಿ ಯಜಮಾನನಾಗಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಮೂಲಕ ಭಕ್ತರ ದರ್ಶನಕ್ಕೆ ಬಾಲ ರಾಮ ಮುಕ್ತನಾಗಲಿದ್ದಾನೆ.
ಈ ಬಗ್ಗೆ ಟ್ವೀಟ್ ಮಾಡಿದ ಪ್ರಧಾನಿ ಮೋದಿ ಅಯೋಧ್ಯಾ ಧಾಮದಲ್ಲಿ ಶ್ರೀರಾಮ ಲಲ್ಲಾ ಅವರ ಪ್ರಾಣ ಪ್ರತಿಷ್ಠೆಯ ಅಲೌಕಿಕ ಕ್ಷಣವು ಎಲ್ಲರನ್ನೂ ಭಾವುಕರನ್ನಾಗಿಸಲಿದೆ. ಈ ದಿವ್ಯ ಕಾರ್ಯಕ್ರಮದ ಭಾಗವಾಗಿರುವುದು ನನಗೆ ಅತೀವ ಸಂತಸ ತಂದಿದೆ. ಜಯ್ ಸಿಯಾ ರಾಮ್! ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕನ್ನಡಿಗ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಮೂರ್ತಿ ರಾಮಮಂದಿರದಲ್ಲಿ ಪ್ರತಿಷ್ಟಾಪನೆಯಾಗಿದೆ. ಈ ಐತಿಹಾಸಿಕ ಕ್ಷಣಗಳಿಗೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು.ಅಯೋಧ್ಯೆಯ ರಾಮ ಮಂದಿರದ ನೂತನ ಗರ್ಭಗುಡಿಯಲ್ಲಿ ವೇದ ಮಂತ್ರಗಳೊಂದಿಗೆ ಪ್ರಧಾನಿ ಮೋದಿ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ್ದಾರೆ. ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.