alex Certify BREAKING : ರಾಜ್ಯದಲ್ಲಿ ‘ಡೆಂಗ್ಯೂ’ ಭೀತಿ ; ಎಲ್ಲಾ ಶಾಲೆಗಳಿಗೆ ‘ಶಿಕ್ಷಣ ಇಲಾಖೆ’ಯಿಂದ ಮಾರ್ಗಸೂಚಿ ಪ್ರಕಟ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ರಾಜ್ಯದಲ್ಲಿ ‘ಡೆಂಗ್ಯೂ’ ಭೀತಿ ; ಎಲ್ಲಾ ಶಾಲೆಗಳಿಗೆ ‘ಶಿಕ್ಷಣ ಇಲಾಖೆ’ಯಿಂದ ಮಾರ್ಗಸೂಚಿ ಪ್ರಕಟ..!

ಬೆಂಗಳೂರು : ರಾಜ್ಯದಲ್ಲಿ ಡೆಂಗ್ಯೂ ಭೀತಿ ಮನೆ ಮಾಡಿದ್ದು, ಈ ಹಿನ್ನೆಲೆ ಎಲ್ಲಾ ಶಾಲೆಗಳಿಗೆ ಶಿಕ್ಷಣ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.

ರಾಜ್ಯದಲ್ಲಿ ಪ್ರಸ್ತುತ ಡೆಂಗ್ಯೂ, ಚಿಕೂನ್ ಗುನ್ಯ ಹಾಗೂ ಜಿಕಾ ಮುಂತಾದ ರೋಗಗಳು ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ರೋಗಗಳು ಹರಡದಂತೆ ನಿಯಂತ್ರಿಸಲು ಸಂಬಂಧಿಸಿದ ಇಲಾಖೆಗಳು ಮತ್ತು ಶಾಲೆಗಳು ಸೇರಿದಂತೆ ಸಮುದಾಯದ ಸಹಭಾಗಿತ್ವದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಈ ರೋಗಗಳ ಲಕ್ಷಣಗಳು ಕಂಡು ಬಂದಲ್ಲಿ ವಹಿಸಬೇಕಾದ ಅಗತ್ಯ ಕ್ರಮಗಳ ಕುರಿತು ವಿಸ್ತ್ರತವಾದ ಮಾರ್ಗಸೂಚಿಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ವತಿಯಿಂದ ಈಗಾಗಲೇ ಹೊರಡಿಸಲಾಗಿದೆ.

ಈ ಕುರಿತು ಶಾಲಾ ವಿದ್ಯಾರ್ಥಿಗಳ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಈ ಕೆಳಕಂಡ ಅಗತ್ಯ ಕ್ರಮಗಳನ್ನು ಸಕಾಲದಲ್ಲಿ ತೆಗೆದುಕೊಳ್ಳಲು ಆಯಾ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶೈಕ್ಷಣಿಕ ಉಸ್ತುವಾರಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಈ ಮೂಲಕ ಸೂಚಿಸಿದೆ.

1) ಶಾಲಾ ಆವರಣದಲ್ಲಿ ಹಾಗೂ ಸುತ್ತಮುತ್ತಲಿನ ಜಾಗಗಳಲ್ಲಿ ಮತ್ತು ಇಲ್ಲಿನ ಘನ ತ್ಯಾಜ್ಯ ವಸ್ತುಗಳಲ್ಲಿ ನೀರು ಶೇಖರಣೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸತಕ್ಕದ್ದು. ಮತ್ತು ಇಂತಹ ಸನ್ನಿವೇಶಗಳ ಹತ್ತಿರ ಶಾಲಾ ವಿದ್ಯಾರ್ಥಿಗಳು ಸುತ್ತಾಡದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸತಕ್ಕದ್ದು ಹಾಗೂ ಇವುಗಳನ್ನು ತೆರವುಗೊಳಿಸಲು ಹಾಗೂ ವಿಲೇವಾರಿ ಮಾಡಲು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳತಕ್ಕದ್ದು.

2) ಇಂತಹ ಸಂದರ್ಭಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ, ಪುರ ಸಭೆ, ನಗರ ಸಭೆ, ಮಹಾನಗರ ಪಾಲಿಕೆಗಳ (ಸ್ಥಳೀಯ ಸಂಸ್ಥೆಗಳ) ಹಾಗೂ ಸ್ಥಳೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಸಹಕಾರದಿಂದ ಶಾಲಾ ಕಟ್ಟಡದಲ್ಲಿ ಅಥವಾ ಆವರಣದಲ್ಲಿ ಸಂಗ್ರಹವಾಗಿರುವ ನೀರನ್ನು ಹಾಗೂ ಇಂತಹ ಸನ್ನಿವೇಶಗಳನ್ನು ತೆರವುಗೊಳಿಸಲು ಮತ್ತು ಶಾಲಾ ಪರಿಸರಕ್ಕೆ ಸಾಂಕ್ರಾಮಿಕ ರೋಗ ನಿರೋಧಕ ದ್ರಾವಣಗಳನ್ನು ಕಾಲ-ಕಾಲಕ್ಕೆ ಸಿಂಪಡಿಸಲು ನಿಯಮಾನುಸಾರ ಅಗತ್ಯ ಕ್ರಮವಹಿಸತಕ್ಕದ್ದು.

3) ಶಾಲೆಗಳಲ್ಲಿನ ನೀರಿನ ಸಂಗ್ರಹಕಗಳನ್ನು (ತೊಟ್ಟಿ, ಬ್ಯಾರೆಲ್ ಇತ್ಯಾದಿ)ಗಳನ್ನು ವಾರಕ್ಕೊಮ್ಮೆ ಉಜ್ಜಿ, ತೊಳೆದು, ಖಾಲಿ ಮಾಡಿ. ಒಣಗಿಸಿ ಭರ್ತಿ ಮಾಡಿದ ನಂತರ ಭದ್ರವಾದ ಮುಚ್ಚಳದಿಂದ ಮುಚ್ಚುವುದು.

4) ಶಾಲೆಗಳಲ್ಲಿ ಪ್ರಾರ್ಥನೆ ಸಮಯದಲ್ಲಿ ಡೆಂಗ್ಯೂ ಹಾಗೂ ಇತರೆ ಸಾಂಕ್ರಾಮಿಕ ರೋಗಗಳ ಕುರಿತು ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಹಾಗೂ ನಿಯಂತ್ರಣ ಕ್ರಮಗಳ ಕುರಿತು ಸ್ಥಳೀಯ ಆರೋಗ್ಯ ಸಿಬ್ಬಂದಿ / ಶಾಲಾ ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ಆರೋಗ್ಯ ಶಿಕ್ಷಣ ನೀಡುವುದು.

5) ಈ ರೋಗಗಳ ಹರಡುವಿಕೆಯನ್ನು ತಡೆಗಟ್ಟಲು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಮತ್ತು ನಿಯಂತ್ರಣದಲ್ಲಿ ವಿದ್ಯಾರ್ಥಿಗಳು ಹಾಗೂ ಸಮುದಾಯದ ಸಹಭಾಗಿತ್ವ ಹಾಗೂ ಪಾತ್ರದ ಕುರಿತು ಶಾಲೆಗಳಲ್ಲಿ ಭಾಷಣ ಸ್ಪರ್ಧೆ, ರಸಪ್ರಶ್ನೆ ಹಾಗೂ ಕಿರುನಾಟಕಗಳು ಇತ್ಯಾದಿ ಪತ್ಯೇತರ ಚಟುವಟಿಕೆಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಹಾಗೂ ಶಾಲೆಗಳಲ್ಲಿನ ಸೈನ್ಸ್ ಕ್ಲಬ್ ಚಟುವಟಿಕೆಗಳ ಮೂಲಕ ಇಂತಹ ಈ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಹಾಗೂ ಈ ಮಾಹಿತಿಯು ವಿದ್ಯಾರ್ಥಿಗಳ ಮೂಲಕ ಪೋಷಕರ ಮತ್ತು ಪಾಲಕರ ಸಮುದಾಯಕ್ಕೆ ತಲುಪಿಸುವಂತೆ ತಿಳಿಸುವುದು.

6) ಒಂದು ವೇಳೆ ಶಾಲಾ ವಿದ್ಯಾರ್ಥಿಗಳಲ್ಲಿ ಇಂತಹ ಜ್ವರ ಪ್ರಕರಣಗಳು ವರದಿಯಾದಲ್ಲಿ ತಕ್ಷಣ ಅಂತಹ ವಿದ್ಯಾರ್ಥಿಯನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಸೂಕ್ತ ಚಿಕಿತ್ಸೆಯನ್ನು ಕೊಡಿಸುವುದು ಮತ್ತು ಶುಶೂಷೆ ಮಾಡಿಸಲು ಅಗತ್ಯ ಕ್ರಮವಹಿಸುವುದು. ಒಂದು ವೇಳೆ ಶಾಲೆಗಳಲ್ಲಿ ಗುಂಪು ಜ್ವರ ಪ್ರಕರಣಗಳು ವರದಿಯಾದಲ್ಲಿ ಸ್ಥಳೀಯ, ತಾಲ್ಲೂಕು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತ್ವರಿತವಾಗಿ ಮಾಹಿತಿ ನೀಡಿ, ಹತ್ತಿರದ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಸೂಕ್ತ ಚಿಕಿತ್ಸೆ ದೊರಕಲು ಮತ್ತು ಶುಶೂಷೆ ಮಾಡಿಸಲು ಅಗತ್ಯ ಕ್ರಮವಹಿಸತಕ್ಕದ್ದು. ಇಂತಹ ಸಂದರ್ಭಗಳಲ್ಲಿ ಅನಾರೋಗ್ಯ ಪೀಡಿತನಾಗಿರುವ ವಿದ್ಯಾರ್ಥಿಯ ಸಂಪರ್ಕಕ್ಕೆ ಬೇರೆ ವಿದ್ಯಾರ್ಥಿಗಳು ಬಾರದಂತೆ ಆಗತ್ಯ ಮುನ್ನೆಚ್ಚರಿಕೆವಹಿಸತಕ್ಕದ್ದು.

ಮೇಲ್ಕಂಡ ಎಲ್ಲಾ ಅಂಶಗಳನ್ನು ಕಟ್ಟನಿಟ್ಟಾಗಿ ಪಾಲಿಸುವುದರೊಂದಿಗೆ ಇಂತಹ ರೋಗಗಳಿಂದ ಯಾವುದೇ ವಿದ್ಯಾರ್ಥಿ ಅಥವಾ ವಿದ್ಯಾರ್ಥಿಗಳಿಗೆ ಇಂತಹ ಯಾವುದೇ ತೊಂದರೆ ಆಗದಂತೆ ಅಗತ್ಯ ಮುನ್ನೆಚ್ಚರಿಕಾ ಹಾಗೂ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಶಾಲೆಗಳನ್ನು ನಡೆಸಿಕೊಂಡು ಹೋಗುವಂತೆ ಈ ಮೂಲಕ ಸೂಚಿಸಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...