ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿದ್ದ ಭಾರತೀಯ ಕ್ರಿಕೆಟಿಗ, ಕನ್ನಡಿಗರ ಮಯಾಂಕ್ ಅಗರ್ವಾಲ್ ಅವರನ್ನು ಅಗರ್ತಲಾದ ಐಎಲ್ಎಸ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ನವದೆಹಲಿಗೆ ತೆರಳುವ ವಿಮಾನ ಟೇಕ್ ಆಫ್ ಆಗುವ ಮುನ್ನ ಅನಾರೋಗ್ಯಕ್ಕೆ ಒಳಗಾದ ಅಗರ್ವಾಲ್ ಅವರನ್ನು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಲಾಗಿತ್ತು. ಸದ್ಯ, ಐಎಲ್ಎಸ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಬೆಂಗಳೂರಿಗೆ ವಾಪಸಾಗುತ್ತಿದ್ದ ಮಯಾಂಕ್ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
“ಮಯಾಂಕ್ ಚೇತರಿಸಿಕೊಳ್ಳಲು 2 ರಿಂದ 3 ದಿನಗಳು ತೆಗೆದುಕೊಳ್ಳುತ್ತದೆ ಎಂದು ನಾವು ಭಾವಿಸಿದ್ದೆವು. 24 ಗಂಟೆಗಳಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು. ಏನಾಯಿತೋ ಅದು ಗೊತ್ತಿಲ್ಲ. ನಾನು ಈಗ ಅದರ ಬಗ್ಗೆ ಮಾತನಾಡಲು ಬಯಸುವುದಿಲ್ಲ. ತ್ರಿಪುರಾದಲ್ಲಿ ಅವರ ಕಾಳಜಿ ಅದ್ಭುತವಾಗಿತ್ತು” ಎಂದು ಕರ್ನಾಟಕ ಕೋಚ್ ಹೇಳಿದ್ದಾರೆ.
ಅಗರ್ವಾಲ್ ವಿಮಾನದಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ನೀರಿನ ಬಾಟಲಿ ಎಂದು ಭಾವಿಸಿ ರಾಸಾಯನಿಕ ಸೇವಿಸಿದ್ದಾರೆ. ತಕ್ಷಣವೇ ಅವರಿಗೆ ಗಂಟಲು ಮತ್ತು ಬಾಯಲ್ಲಿ ಉರಿಯ ಅನುಭವವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು.