ನವದೆಹಲಿ: 2024 ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ನವದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಬಿಡುಗಡೆ ಮಾಡಿದೆ.
ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನ ಉನ್ನತ ನಾಯಕರು ಸಾರ್ವತ್ರಿಕ ಚುನಾವಣೆಗೆ ಕೆಲವು ದಿನಗಳ ಮೊದಲು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ‘ಯುವ ನ್ಯಾಯ್’, ‘ನಾರಿ ನ್ಯಾಯ್’, ‘ಕಿಸಾನ್ ನ್ಯಾಯ್’, ‘ಶ್ರಮಿಕ್ ನ್ಯಾಯ್’ ಮತ್ತು ‘ಹಿಸ್ಸೆದಾರಿ ನ್ಯಾಯ್’ ಸೇರಿದಂತೆ 5 ಗ್ಯಾರಂಟಿಗಳಿಗೆ ಒತ್ತು ನೀಡಿದೆ.
ಕಾಂಗ್ರೆಸ್ ಪ್ರಣಾಳಿಕೆ ‘ನ್ಯಾಯ್ ಪತ್ರ’ದ ಪ್ರಮುಖ ಭರವಸೆಗಳು
ಕೇಂದ್ರ ಸರ್ಕಾರದ ವಿವಿಧ ಹಂತಗಳಲ್ಲಿ ಮಂಜೂರಾದ ಹುದ್ದೆಗಳಲ್ಲಿ ಸುಮಾರು 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
ಸಾರ್ವತ್ರಿಕ ಆರೋಗ್ಯ ರಕ್ಷಣೆಗಾಗಿ 25 ಲಕ್ಷ ರೂ.ಗಳವರೆಗೆ ನಗದು ರಹಿತ ವಿಮೆಯ ರಾಜಸ್ಥಾನ ಮಾದರಿಯನ್ನು ಅಳವಡಿಸಿಕೊಳ್ಳಲಾಗುವುದು.
ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಪ್ರತಿ ವರ್ಷ ಸರ್ಕಾರ ಘೋಷಿಸುವ ಎಂಎಸ್ಪಿಗೆ ಕಾಂಗ್ರೆಸ್ ಕಾನೂನು ಖಾತರಿ ನೀಡುತ್ತದೆ.