ಬೆಂಗಳೂರು : ಹುತಾತ್ಮ ಅರಣ್ಯ ಸಿಬ್ಬಂದಿಗಳ ಕುಟುಂಬಕ್ಕೆ ನೀಡುವ ಪರಿಹಾರ ಮೊತ್ತ 30 ರಿಂದ 50 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನದ ಅಂಗವಾಗಿ ಹುತಾತ್ಮ ಅರಣ್ಯ ಸಿಬ್ಬಂದಿಗಳ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಪ್ರಕೃತಿಯಿಂದ ಲಾಭ ಪಡೆಯುತ್ತಿರುವ ಎಲ್ಲರಿಗೂ ಪ್ರಕೃತಿ ರಕ್ಷಣೆಯ ಹೊಣೆ ಇದೆ. ರಾಜ್ಯದಲ್ಲಿ ಅನುಪಾತಕ್ಕೆ ತಕ್ಕಷ್ಟು ಅರಣ್ಯವಿಲ್ಲ. ಆದ್ದರಿಂದ ಅರಣ್ಯೀಕರಣ ಹೆಚ್ಚಾಗಬೇಕು. ಕಾಡು ಮತ್ತು ವನ್ಯಜೀವಿ ಸಂಪತ್ತಿನ ರಕ್ಷಣೆ ಕೇವಲ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಯ ಕರ್ತವ್ಯ ಎಂದರೆ ನಾವು ನಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಂತಾಗುತ್ತದೆ. ರಾಜ್ಯದಲ್ಲಿ ಆನೆ, ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದು ಸಂತೋಷದ ಸಂಗತಿ. ಆದರೆ ಪ್ರಾಣಿ-ಮನುಷ್ಯ ಸಂಘರ್ಷ ತಪ್ಪಿಸಿ ಮಾನವ, ಪ್ರಾಣಿ ಸಂಪತ್ತನ್ನು ಕಾಪಾಡುವ ದಿಕ್ಕಿನಲ್ಲಿ ಇನ್ನಷ್ಟು ಪರಿಣಾಮಕಾರಿ ಕೆಲಸಗಳು ಆಗಬೇಕಿದೆ. ಇದಕ್ಕಾಗಿ ಲಭ್ಯ ಇರುವ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಅರಣ್ಯ ಹುತಾತ್ಮರ ಕುಟುಂಬಕ್ಕೆ ನೀಡುವ ಪರಿಹಾರ ಮೊತ್ತವನ್ನು 30 ರಿಂದ 50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅರಣ್ಯ ಹುತಾತ್ಮರು ಮನುಕುಲದ ಸಂರಕ್ಷಕರು. ಇವರ ತ್ಯಾಗ ಅರಣ್ಯ ಸಂರಕ್ಷಣೆಗೆ ಸ್ಫೂರ್ತಿಯಾಗಲಿ ಎಂದು ಆಶಿಸುತ್ತೇನೆ ಎಂದರು.