ಬೆಂಗಳೂರು : ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಲೀಲಾವತಿ ಶುಕ್ರವಾರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ.
ಸದ್ಯ, ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಲೀಲಾವತಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಬಿ,ಎಸ್ ಯಡಿಯೂರಪ್ಪ, ಹಿರಿಯ ನಟ , ನಿರ್ಮಾಪಕ ದ್ವಾರಕೀಶ್, ನಟಿ ಸುಧಾರಾಣಿ, ನಟ ಉಪೇಂದ್ರ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು.
ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ ನಟಿ ಲೀಲಾವತಿ ಪರಿಪೂರ್ಣ ಕಲಾವಿದೆಯಾಗಿದ್ದರು. ಐತಿಹಾಸಿಕ ಪಾತ್ರ ಮಾಡಿದ್ದರು. ಯಾವುದೇ ಪಾತ್ರಗಳನ್ನು ಲೀಲಾಜಾಲವಾಗಿ ಮಾಡುವಂತ ಅದ್ಬುತ ಕಲಾವಿದೆ ಎಂದು ಬಣ್ಣಿಸಿದರು. ನಟಿ ಕಲಾ ಸೇವೆ ಮಾತ್ರವಲ್ಲದೇ ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.