ಬೆಂಗಳೂರು : ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿ ಗುಣಮುಖರಾಗಿ ಬೆಂಗಳೂರಿಗೆ ಆಗಮಿಸಿದ ನಟ ಶಿವರಾಜ್ ಕುಮಾರ್ ಅವರನ್ನು ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಬೆಂಗಳೂರಿನ ನಾಗವಾರದಲ್ಲಿರುವ ನಟ ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಶಿವಣ್ಣನ ಆರೋಗ್ಯ ವಿಚಾರಿಸಿದರು.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಅನಾರೋಗ್ಯ ನಿಮಿತ್ತ ವಿದೇಶದಲ್ಲಿ ಶಸ್ತ್ರಚಿಕಿತ್ಸೆಗೆ ಪಡೆದು ಗುಣಮುಖರಾಗಿ ಬಂದಿರುವ ಚಿತ್ರರಂಗದ ಖ್ಯಾತ ನಟ, ಆತ್ಮೀಯರು ಆದ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ, ಆರೋಗ್ಯ ವಿಚಾರಿಸಿದೆ. ಶಿವರಾಜ್ ಕುಮಾರ್ ಅವರು ಮತ್ತೆ ಹಿಂದಿನಂತೆ ಕ್ರಿಯಾಶೀಲರಾಗಿರುವುದು ಕಂಡು ಖುಷಿಯಾಯಿತು. ಅಭಿಮಾನಿಗಳ ಹರಕೆ – ಹಾರೈಕೆ, ಆತ್ಮಬಲದಿಂದ ಅನಾರೋಗ್ಯವನ್ನು ಗೆದ್ದು ಬಂದಿರುವ ಶಿವರಾಜ್ ಕುಮಾರ್ ಅವರ ಮುಂದಿನ ಜೀವನ ಸುಖ – ಶಾಂತಿಯಿಂದ ಕೂಡಿರಲಿ ಎಂದು ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಅನಾರೋಗ್ಯ ನಿಮಿತ್ತ ವಿದೇಶದಲ್ಲಿ ಶಸ್ತ್ರಚಿಕಿತ್ಸೆಗೆ ಪಡೆದು ಗುಣಮುಖರಾಗಿ ಬಂದಿರುವ ಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ಅವರನ್ನು ಮುಖ್ಯಮಂತ್ರಿ @siddaramaiah ಅವರು ಭೇಟಿಯಾಗಿ, ಆರೋಗ್ಯ ವಿಚಾರಿಸಿದರು. pic.twitter.com/ANZpbR110Y
— CM of Karnataka (@CMofKarnataka) January 27, 2025
‘ಕಿಂಗ್ ಈಸ್ ಬ್ಯಾಕ್’
ಅಮೆರಿಕಾದಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆದು, ಕ್ಯಾನ್ಸರ್ ಕಾಯಿಲೆ ಗೆದ್ದು ಬಂದಿರುವ ನಟ ಶಿವರಾಜ್ ಕುಮಾರ್ ತಾಯ್ನಾಡಿಗೆ ವಾಪಾಸ್ ಆಗಿದ್ದಾರೆ. ಬೆಂಗಳೂರಿಗೆ ಆಗಮಿಸಿರುವ ನಟ ಶಿವರಾಜ್ ಕುಮಾರ್ ಗೆ ಫ್ಯಾನ್ಸ್ ಅದ್ದೂರಿ ಸ್ವಾಗತ ಕೋರಿದ್ದಾರೆ.
ಎಲ್ಲರ ಧೈರ್ಯ, ಆಶಿರ್ವಾದದಿಂದಾಗಿ ಚಿಕಿತ್ಸೆ ಪಡೆದು ಗುಣಮುಖನಾಗಿ ವಾಪಾಸ್ ಆಗಿದ್ದೇನೆ. ತುಂಬಾ ಜನರು ನನಗೆ ಧೈರ್ಯ ತುಂಬಿದ್ದರು. ನಿಮ್ಮ ಧೈರ್ಯವನ್ನು ಮೆಚ್ಚಬೇಕು ಎಂತಾ ವೈದ್ಯರು ಕೂಡ ಹೇಳಿದ್ದರು ಎಂದರು.ಎರಡ್ಮೂರು ದಿನಗಳ ಕಾಲ ಲಿಕ್ವಿಡ್ ಫುಡ್ ನಲ್ಲೇ ಇದ್ದೆ. ಜೀವನವೇ ಒಂದು ಪಾಠ. ಜೀವನದಲ್ಲಿ ಇದೆಲ್ಲ ತಾನಾಗಿ ಬರುತ್ತೆ. ಎದುರಿಸುತ್ತಾ ಹೋಗಬೇಕು. ನಾನು ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತಿದ್ದೇನೆ ಎಂದು ಹೇಳಿದರು.