ಕಲಬುರಗಿ : ಅಫಜಲಪೂರ ತಾಲೂಕಿನ ಚಿಣಮಗೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ ಬಿಸಿಯೂಟ ಬಡಿಸುವ ಸಂದರ್ಭದಲ್ಲಿ ಸಾಂಬಾರಗೆ ಬಿದ್ದ ಪ್ರಕರಣದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
ಶಾಲೆಯಲ್ಲಿ ಬಿಸಿಯೂಟ ತಯಾರಿಸುವಾಗ ಸಾಂಬರ್ ಪಾತ್ರೆಗೆ ಬಿದ್ದು 2 ನೇ ತರಗತಿ ವಿದ್ಯಾರ್ಥಿ ಮಹಾಂತಮ್ಮ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾಳೆ.
ಸುರಕ್ಷಿತವಾಗಿ ಬಿಸಿಯೂಟ ವಿತರಿಸದೆ ಕರ್ತವ್ಯ ನಿರ್ಲಕ್ಷ್ಯ ವಹಿಸಿದ ಆರೋಪದ ಮೇರೆಗೆ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಲಾಲಬಿ ನದಾಫ್ ಮತ್ತು ಸಹ ಶಿಕ್ಷಕ ರಾಜು ಚವ್ಹಾಣ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತು ಹಾಗೂ ಮುಖ್ಯ ಅಡುಗೆಯವರಾದ ಕಸ್ತೂರಿಬಾಯಿ ಎಂ.ತಳಕೇರಿ ಅವರನ್ನು ವಜಾಗೊಳಿಸಿ ಕ್ರಮವಾಗಿ ಡಿ.ಡಿ.ಪಿ.ಐ ಮತ್ತು ತಾಲೂಕ ಪಂಚಾಯತ್ ಇ.ಓ ಅವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಸುರಕ್ಷಿತ ಬಿಸಿಯೂಟ ವಿತರಣೆ ಮಾಡದಿರುವುದು ಗಂಭೀರ ಕರ್ತವ್ಯ ಲೋಪವಾಗಿದೆ. ಈ ಸಂಬಂಧ ಅಫಜಲಪೂರ ಬಿ.ಇ.ಓ ಅವರ ವರದಿ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ ಕರ್ನಾಟಕ ಸೇವಾ ನಿಯಮಾವಳಿ (ವರ್ಗೀಕರಣ ನಿಯಂತ್ರಣ ಮತ್ತು ಅಪೀಲು) 1957ರ ನಿಯಮ 10(1)ರ ಪ್ರಕಾರ ಮುಖ್ಯ ಶಿಕ್ಷಕಿ ಲಾಲಬಿ ನದಾಫ್ ಮತ್ತು ಸಹ ಶಿಕ್ಷಕ ರಾಜು ಚವ್ಹಾಣ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಡಿ.ಡಿ.ಪಿ.ಐ ಸಕ್ರೆಪ್ಪಗೌಡ ಬಿರಾದಾರ ಅವರು ಆದೇಶ ಹೊರಡಿಸಿದ್ದಾರೆ.