ಬೆಂಗಳೂರು : ಬೆಂಗಳೂರಿನ ಪ್ರತಿಷ್ಟಿತ ರೆಸ್ಟೋರೆಂಟ್ ಗೆ ಬಾಂಬೆ ಬೆದರಿಕೆ ಕರೆಯೊಂದು ಬಂದಿದ್ದು, ಕರೆ ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ.
ಮಹದೇವಪುರ ಠಾಣಾ ವ್ಯಾಪ್ತಿಯ ಪಾಸ್ತಾ ಸ್ಟ್ರೀಟ್ ರೆಸ್ಟೋರೆಂಟ್ ಗೆ ರಾತ್ರಿ ಬಾಂಬ್ ಕರೆ ಬಂದಿದ್ದು, ಶೀಘ್ರವೇ ಬಾಂಬ್ ಬ್ಲಾಸ್ಟ್ ಆಗುತ್ತದೆ ಎಂದು ಬೆದರಿಕೆಯೊಡ್ಡಿದ್ದನು. ಇದರಿಂದ ಬೆಚ್ಚಿಬಿದ್ದ ರೆಸ್ಟೋರೆಂಟ್ ಮಾಲೀಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ನಂತರ ಪೊಲೀಸರು ರೆಸ್ಟೋರೆಂಟ್ ಗೆ ತೆರಳಿ ಪರಿಶೀಲನೆ ನಡೆಸಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಲಿಲ್ಲ. ನಂತರ ಇದು ಹುಸಿ ಕರೆ ಎಂದು ತಿಳಿದು ಬಂದಿದೆ.
ಸದ್ಯ, ಹುಸಿ ಬಾಂಬ್ ಕರೆ ಮಾಡಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತನನ್ನು ವೇಲು ಎಂದು ಗುರುತಿಸಲಾಗಿದ್ದು, ಈತ ಅದೇ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದನು. ಸಂಬಳ ಕೊಟ್ಟಿಲ್ಲ ಎಂದು ಸಿಟ್ಟಿನಲ್ಲಿ ಈತ ಹುಸಿ ಕರೆ ಮಾಡಿದ್ದನು ಎಂದು ವಿಚಾರಣೆ ವೇಳೆ ಬಯಲಾಗಿದೆ. ಈ ಸಂಬಂಧ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.