ಮಂಡ್ಯ : ವಿಧಿವಶರಾಗಿದ್ದ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಪಾರ್ಥಿವ ಶರೀರ ಇದೀಗ ಮಂಡ್ಯದ ಸೋಮನಹಳ್ಳಿಗೆ ಆಗಮಿಸಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಗೆ ಎಸ್ ಎಂ ಕೃಷ್ಣ ಅವರ ಪಾರ್ಥಿವ ಶರೀರ ತಲುಪಿದ್ದು, ಅಂತಿಮ ದರ್ಶನಕ್ಕೆ ಜನರು ಸಾಲುಗಟ್ಟಿ ನಿಂತಿದ್ದಾರೆ.
ಸದಾಶಿವನಗರದ ಎಸ್ ಎಂ ಕೃಷ್ಣಅವರ ‘ಶಾಂಭವಿ’ ನಿವಾಸದಿಂದ ಆರಂಭವಾಗಿದ್ದ ಎಸ್.ಎಂ ಕೃಷ್ಣ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಇದೀಗ ಸೋಮನಹಳ್ಳಿ ತಲುಪಿದೆ. ಮಧ್ಯಾಹ್ನ 3 ಗಂಟೆ ಬಳಿಕ ಎಸ್.ಎಂ ಕೃಷ್ಣ ಪಾರ್ಥಿವ ಶರೀರದ ಅಂತಿಮ ವಿಧಿ ವಿಧಾನ ಕಾರ್ಯ ಆರಂಭವಾಗಲಿದೆ.
ಬೆಂಗಳೂರಿನ ಸದಾಶಿವನಗರ ಸ್ವಗೃಹದಿಂದ ಹೂವಿನಿಂದ ಅಲಂಕೃತಗೊಂಡ ವಾಹನದಲ್ಲಿ ಪಾರ್ಥಿವ ಶರೀರ ಕೊಂಡೊಯ್ಯಲಾಗಿದೆ.ಬೆಂಗಳೂರಿನ ಟೌನ್ ಹಾಲ್, ಮೈಸೂರು ಸರ್ಕಲ್, ಬಿಡದಿ, ರಾಮನಗರ, ಚನ್ನಪಟ್ಟಣ ಮೂಲಕ ಮಂಡ್ಯದ ಮದ್ದೂರಿಗೆ ಪಾರ್ಥಿವ ಶರೀರ ಆಗಮಿಸಿದೆ. ಮಧ್ಯಾಹ್ನ 3 ಗಂಟೆಯ ನಂತರ ಒಕ್ಕಲಿಗ ಸಂಪ್ರದಾಯದಿಂದ ಅಂತ್ಯಸಂಸ್ಕಾರ ಕಾರ್ಯ ನೆರವೇರಲಿದೆ.