ಶೃಂಗೇರಿ : ಬಿಜೆಪಿ ಮುಖಂಡನ ಮೇಲೆ ಸುಳ್ಳು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ನಡೆದಿದೆ.
ಶೃಂಗೇರಿಯ ಬಿಜೆಪಿ ಮುಖಂಡ ಹರೀಶ್ ಶೆಟ್ಟಿಯ ವಿರುದ್ಧ ಲೈಂಗಿಕ ಆರೋಪ ಕೇಳಿಬಂದಿತ್ತು. ಶೃಂಗೇರಿಯ ಶಬರೀಶ್ ಹಾಗೂ ರಂಗನಾಥ್ ಎಂಬುವವರು ಹರೀಶ್ ಶೆಟ್ಟಿ ಅವರ ವಿರುದ್ಧ ಸುಳ್ಳು ಆರೋಪ ಮಾಡಿದ್ದರು. ಅಪ್ರಾಪ್ತ ಬಾಲಕರ ಮೇಲೆ ಹರೀಶ್ ಶೆಟ್ಟಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ದಲಿತ ಬಾಲಕರಿಂದ ವಿಡಿಯೋ ಮಾಡಿಸಿ ವೈರಲ್ ಮಾಡಿಸಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದರು.
ಬಾಲಕರನ್ನು ಅಧಿಕಾರಿಗಳು ಕೌನ್ಸೆಲಿಂಗ್ ನಡೆಸಿದಾಗ ಅಸಲಿ ಸತ್ಯ ಬಯಲಾಗಿದೆ, ವೈಯಕ್ತಿಕ ದ್ವೇಷದ ಹಿನ್ನೆಲೆ ಅಪ್ರಾಪ್ತ ಬಾಲಕರನ್ನು ಬಳಸಿಕೊಂಡು ಹರೀಶ್ ಶೆಟ್ಟಿ ಅವರ ವಿರುದ್ಧ ಸುಳ್ಳು ಆರೋಪ ಮಾಡಿರುವುದು ಗೊತ್ತಾಗಿದೆ. ಸದ್ಯ ಓರ್ವನನ್ನು ಬಂಧಿಸಿರುವ ಪೊಲೀಸರು ಮತ್ತೋರ್ವನಿಗಾಗಿ ಬಲೆ ಬೀಸಿದ್ದಾರೆ.