ನವದೆಹಲಿ : ಬಿಲ್ಕಿಸ್ ಬಾನು ಪ್ರಕರಣದ ಎಲ್ಲಾ 11 ಅಪರಾಧಿಗಳು ಸುಪ್ರೀಂ ಕೋರ್ಟ್ ವಿಧಿಸಿದ ಗಡುವಿನ ಪ್ರಕಾರ ಗುಜರಾತ್ನ ಪಂಚಮಹಲ್ ಜಿಲ್ಲೆಯ ಗೋಧ್ರಾ ಉಪ ಜೈಲಿನಲ್ಲಿ ಭಾನುವಾರ ತಡರಾತ್ರಿ ಶರಣಾಗಿದ್ದಾರೆ.
“ಎಲ್ಲಾ 11 ಅಪರಾಧಿಗಳು ಭಾನುವಾರ ತಡರಾತ್ರಿ ಜೈಲು ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ” ಎಂದು ಸ್ಥಳೀಯ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ಎನ್ಎಲ್ ದೇಸಾಯಿ ತಿಳಿಸಿದ್ದಾರೆ.
ಪ್ರಕರಣದ 11 ಅಪರಾಧಿಗಳಿಗೆ ಗುಜರಾತ್ ಸರ್ಕಾರ ನೀಡಿದ್ದ ಕ್ಷಮಾದಾನವನ್ನು ಸುಪ್ರೀಂ ಕೋರ್ಟ್ ಜನವರಿ 8 ರಂದು ರದ್ದುಗೊಳಿಸಿತ್ತು. 2022 ರ ಸ್ವಾತಂತ್ರ್ಯ ದಿನದಂದು ಅಕಾಲಿಕವಾಗಿ ಬಿಡುಗಡೆಯಾದ ಅಪರಾಧಿಗಳನ್ನು ಎರಡು ವಾರಗಳಲ್ಲಿ ಮತ್ತೆ ಜೈಲಿಗೆ ಹೋಗುವಂತೆ ಅದು ಆದೇಶಿಸಿತು.
ಶರಣಾಗಲು ಹೆಚ್ಚಿನ ಸಮಯವನ್ನು ನೀಡುವಂತೆ ಅಪರಾಧಿಗಳು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಕೆಲವು ದಿನಗಳ ಹಿಂದೆ ತಿರಸ್ಕರಿಸಿತ್ತು ಮತ್ತು ಭಾನುವಾರದೊಳಗೆ ಶರಣಾಗುವಂತೆ ಹೇಳಿತ್ತು.
ಬಕಾಭಾಯ್ ವೊಹಾನಿಯಾ, ಬಿಪಿನ್ ಚಂದ್ರ ಜೋಶಿ, ಕೇಸರ್ ಭಾಯ್ ವೊಹಾನಿಯಾ, ಗೋವಿಂದ್ ನಾಯ್, ಜಸ್ವಂತ್ ನಾಯ್, ಮಿತೇಶ್ ಭಟ್, ಪ್ರದೀಪ್ ಮೊರ್ಧಿಯಾ, ರಾಧೇಶ್ಯಾಮ್ ಶಾ, ರಾಜುಭಾಯ್ ಸೋನಿ, ರಮೇಶ್ ಚಂದನಾ ಮತ್ತು ಶೈಲೇಶ್ ಭಟ್ ಅವರು 11 ಅಪರಾಧಿಗಳು.