ಬೀದರ್ : ಬೀದರ್ ನಲ್ಲಿ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಚಿನ್ ಗುತ್ತಿಗೆದಾರನೇ ಅಲ್ಲ ಎಂದು ಹೇಳಲಾಗುತ್ತಿದೆ.
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ್ ಈ ಬಗ್ಗೆ ಮಾಹಿತಿ ನೀಡಿದ್ದು, ಸಚಿನ್ ಗುತ್ತಿಗೆದಾರನೇ ಅಲ್ಲ ಎಂದು ಹೇಳಿದ್ದಾರೆ. ಗುತ್ತಿಗೆದಾರ ಎಂದು ಎಲ್ಲೂ ನೋಂದಣಿ ಇಲ್ಲ. ಎಲ್ಲೂ ಸಚಿನ್ ಪಾಂಚಾಳ್ ಹೆಸರೂ ನೋಂದಣಿ ಆಗಿಲ್ಲ, ಆತನ ಹೆಸರಿನಲ್ಲಿ ಲೈಸೆನ್ಸ್ ಇಲ್ಲ ಈ ಬಗ್ಗೆ ಬೀದರ್ ಗುತ್ತಿಗೆದಾರ ಸಂಘದ ಅಧ್ಯಕ್ಷರಿಂದಲೂ ಮಾಹಿತಿ ಪಡೆದಿದ್ದೇವೆ ಎಂದು ಹೇಳಿದ್ದಾರೆ.
ಸದ್ಯ, ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧನ್ನೂರ ಪೊಲೀಸ್ ಠಾಣೆಯ ಪಿಎಸ್ಐ ವಿಶ್ವಾರಾಧ್ಯ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ.ದೂರು ದಾಖಲಿಸಲು ಹಿಂದೇಟು ಹಾಕಿದ್ದಾರೆ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದ ಗುತ್ತಿಗೆದಾರ ಸಚಿನ್ ಕುಟುಂಬದವರು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿಶ್ವಾರಾಧ್ಯ ಅವರನ್ನು ಕಲಬುರಗಿ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಧನ್ನೂರು ಪೊಲೀಸ್ ಠಾಣೆಯಿಂದ ಕಲಬುರಗಿ ಕೇಂದ್ರ ಕಚೇರಿಗೆ ಅವರನ್ನು ವರ್ಗಾಯಿಸಲಾಗಿದೆ.
ಇನ್ನು ವಿಧಿವಿಜ್ಞಾನ ಕೇಂದ್ರದಿಂದ ಎಫ್ಎಸ್ಎಲ್ ವರದಿ ಸಲ್ಲಿಕೆಯಾಗಿದ್ದು, ಕೈಬರಹ ಸಚಿನ್ ಪಾಂಚಾಲ್ ಅವರದ್ದಾಗಿದೆ ಎಂದು ದೃಢಪಟ್ಟಿದೆ. ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿದ್ದು, ರೈಲ್ವೆ ಪೊಲೀಸರಿಂದ ಸಿಐಡಿ ಕಚೇರಿಗೆ ದಾಖಲೆ ವರ್ಗಾವಣೆ ಮಾಡಲಾಗಿದೆ. ಸಿಐಡಿ ತಂಡ ತನಿಖೆಯನ್ನು ಚುರುಕುಗೊಳಿಸಲಿದೆ.