ಮುಂಬೈ : ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖಂಡ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಮೂರನೇ ಆರೋಪಿಯನ್ನು ಪುಣೆಯಲ್ಲಿ ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಬಂಧಿತ ಮೂರನೇ ಆರೋಪಿಯನ್ನು ಪ್ರವೀಣ್ ಲೋಂಕರ್ ಎಂದು ಗುರುತಿಸಲಾಗಿದ್ದು, ದಾಳಿ ನಡೆಸಲು ಶೂಟರ್ಗಳನ್ನು ನೇಮಿಸಿಕೊಂಡ ಪ್ರಮುಖ ಸಂಚುಕೋರರಲ್ಲಿ ಒಬ್ಬನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಡಳಿತ ಪಕ್ಷದ ನಾಯಕನ ಹತ್ಯೆಯಲ್ಲಿ ಭಾಗಿಯಾಗಿದ್ದ ಮೂವರು ಶೂಟರ್ ಗಳಲ್ಲಿ ಇಬ್ಬರನ್ನು ಮುಂಬೈ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಎಸ್ಪ್ಲನೇಡ್ ನ್ಯಾಯಾಲಯವು ಆರೋಪಿಗಳಾದ ಗುರ್ಮೈಲ್ ಸಿಂಗ್ ಮತ್ತು ಧರ್ಮರಾಜ್ ಕಶ್ಯಪ್ ಅವರನ್ನು ಅಕ್ಟೋಬರ್ 21 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಮತ್ತೊಬ್ಬ ಶೂಟರ್ ಶಿವಕುಮಾರ್ ಗೌತಮ್ ಪರಾರಿಯಾಗಿದ್ದಾನೆ.
ಬಾಬಾ ಸಿದ್ದೀಕಿ ಶನಿವಾರದಂದು ಪೂರ್ವ ಬಾಂದ್ರಾದಲ್ಲಿರುವ ತಮ್ಮ ಪುತ್ರ ಜೀಶಾನ್ ಸಿದ್ದೀಕಿ ಅವರ ಕಛೇರಿ ಬಳಿ ನಿಂತಿರುವಾಗ ಮೂವರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗುಂಡಿನ ಮಳೆಗರೆದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.