ಬೆಂಗಳೂರು : ಬೆಂಗಳೂರಿನಲ್ಲಿ ಮಾಲ್ ಆಫ್ ಏಷ್ಯಾ ಮೇಲೆ ದಾಳಿ ನಡೆಸಲು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಯತ್ನ ನಡೆಸಿದ್ದು, ಮಹಿಳಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕನ್ನಡದಲ್ಲಿ ನಾಮಫಲಕ ಕಡ್ಡಾಯಗೊಳಿಸಿ ಕಾರ್ಯಕರ್ತರು ಬೆಂಗಳೂರಿನಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಮಾಲ್ ಆಫ್ ಏಷ್ಯಾ ಮೇಲೆ ಕರವೇ ದಾಳಿ ಯತ್ನ ನಡೆಸಿದ್ದು, ಮಾಲ್ ಎದುರು ಮಹಿಳಾ ಕಾರ್ಯಕರ್ತೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬ್ಯಾರಿಕೇಟ್ ದಾಟಿ ಒಳ ನುಗ್ಗಲು ಯತ್ನಿಸಿದ ಕಾರ್ಯಕರ್ತೆಯರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬಸ್ ನಲ್ಲಿ ಕರೆದೊಯ್ದಿದ್ದಾರೆ.
ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ 60% ಕನ್ನಡಕ್ಕೆ ಸರ್ಕಾರದ ಸೂಚನೆ ನೀಡಿದ್ದರೂ ಇಂದು ರಸ್ತೆಗಿಳಿದ ನೂರಾರು ಮಂದಿ ಕಾರ್ಯಕರ್ತರು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ದೊಡ್ಡ ದೊಡ್ಡ ಜಾಹೀರಾತು ಫಲಕ ಏರಿ ಇಂಗ್ಲೀಷ್ ನಾಮಫಲಕಗಳನ್ನು ಹರಿದು ಹಾಕಿದ್ದಾರೆ. ಕೆಲವು ಕಡೆ ಕಲ್ಲು ತೂರಾಟ ಕೂಡ ನಡೆದಿದೆ. ಏರ್ ಪೋರ್ಟ್ ರಸ್ತೆ, ಎಂ.ಜಿ.ರಸ್ತೆ, ಬ್ರಿಗೇಡ್, ರಸ್ತೆ, ಯು.ಬಿ.ಸಿಟಿ ರಸ್ತೆ ಸೇರಿದಂತೆ ಹಲವು ಕಡೆ ಭಾರಿ ಪ್ರತಿಭಟನೆ ನಡೆದಿದೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಯು.ಬಿ.ಸಿಟಿ ರಸ್ತೆಗಳಲ್ಲಿ ಕರವೇ ಕಾರ್ಯಕರ್ತರು, ಇಂಗ್ಲೀಷ್ ಬೋರ್ಡ್ ಗಳನ್ನು ಕಿತ್ತು ಪುಡಿ ಪುಡಿ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.