ಬೆಂಗಳೂರು : ಬೆಂಗಳೂರಿನಲ್ಲಿ ನಿರ್ಮಾಣದ ಹಂತದ ಮತ್ತೊಂದು ಕಟ್ಟಡ ವಾಲಿದ್ದು, ಆತಂಕ ಸೃಷ್ಟಿಯಾಗಿದೆ.
ನಗರದ ಹೊರಮಾವು ನಂಜಪ್ಪ ಗಾರ್ಡನ್ ನಲ್ಲಿರುವ ಕಟ್ಟಡ ವಾಲಿದೆ. ನಿರ್ಮಾಣದ ಹಂತದ 6 ಅಂತಸ್ತಿನ ಕಟ್ಟಡ ಬಲಭಾಗಕ್ಕೆ ವಾಲಿದ್ದು, ಈ ಹಿನ್ನೆಲೆ ಕಟ್ಟಡ ತೆರವಿಗೆ ಬಿಬಿಎಂಪಿ ಸೂಚನೆ ನೀಡಿದೆ.
ಬೆಂಗಳೂರಿನ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿತಗೊಂಡು 8 ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆ ಬಿಬಿಎಂಪಿ ಅಲರ್ಟ್ ಆಗಿದೆ.
ಸಿಎಂ ಖಡಕ್ ಸೂಚನೆ
ಬೆಂಗಳೂರಿನ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿತಗೊಂಡು ಹಲವು ಕಾರ್ಮಿಕರು ಸಾವಿಗೀಡಾದ ಸ್ಥಳಕ್ಕೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿ, ಘಟನೆಯಲ್ಲಿ ಮಡಿದವರ ಕುಟುಂಬಕ್ಕೆ ಸಿಎಂ ಸಾಂತ್ವನ ಹೇಳಿದರು.
ನಿಯಮಬಾಹಿರವಾಗಿ, ಸೂಕ್ತ ಪರವಾನಗಿ ಪಡೆಯದೆ ಕಟ್ಟಡ ನಿರ್ಮಾಣಕ್ಕೆ ಮುಂದಾಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ವಿಭಾಗೀಯ ಅಧಿಕಾರಿಗೂ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು. ಅನಧಿಕೃತ ಕಟ್ಟಡ ನಿರ್ಮಾಣ ನಿಲ್ಲಿಸುವಂತೆ ನೋಟಿಸ್ ನೀಡಿದ್ದರೂ ಕೆಲಸ ಮುಂದುವರೆಸಿದ ಮಾಲೀಕರು, ಗುತ್ತಿಗೆದಾರ, ಎಂಜಿನಿಯರ್ ಎಲ್ಲರ ವಿರುದ್ಧವೂ ಕಠಿಣ ಕಾನೂನು ಕ್ರಮ ಆಗಬೇಕು ಎಂದು ಬಿಬಿಎಂಪಿ ಆಯುಕ್ತರಾದ ತುಷಾರ ಗಿರಿನಾಥ್ ಅವರಿಗೆ ಸೂಚನೆ ನೀಡಿದ್ದೇನೆ. ಮುಂದೆ ಇಂತಹ ದುರ್ಘಟನೆಗಳು ನಡೆಯದ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ ಎಂದರು.