ನವದೆಹಲಿ : ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 12 ರಂದು ನಾಡಿದ್ದು ನಿಗದಿಯಾಗಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿಯ ಮಹತ್ವದ ಸಭೆ ನಾಳೆಯೇ ( ಅ.11) ನಡೆಯಲಿದೆ.
ಸಮಿತಿ ಅಧ್ಯಕ್ಷ ವಿನೀತ್ ಗುಪ್ತಾ ನೇತೃತ್ವದಲ್ಲಿ ಸಭೆ ಕರೆಯಲಾಗಿದ್ದು, ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಪ್ರತಿನಿಧಿಗಳು ವರ್ಚ್ಯುವಲ್ ಮೂಲಕ ಸಬೆಯಲ್ಲಿ ಭಾಗಿಯಾಗಲಿದ್ದಾರೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ಅ.15ವರೆಗೆ ಪ್ರತಿದಿನ 3000 ಕ್ಯೂಸೆಕ್ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದ್ದು , ಈ ಆದೇಶ ಅಂತ್ಯವಾಗುತ್ತಿರುವ ಹಿನ್ನೆಲೆ ನಾಳೆ ಸಭೆ ಕರೆಯಲಾಗಿದೆ.
ಕಾವೇರಿ ನೀರಿಗಾಗಿ ರಾಜ್ಯದಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು. ರಾಜ್ಯದ ವಿವಿಧ ಕಡೆ ರೈತರು, ಕನ್ನಡ ಪರ ಸಂಘಟನೆ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು. ಪ್ರತಿದಿನ 3000 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶ ನೀಡಿರುವುದನ್ನು ವಿರೋಧಿಸಿ ಕರ್ನಾಟಕ, ಬೆಂಗಳೂರು ಬಂದ್ ಗೆ ಕೂಡ ಕರೆ ನೀಡಲಾಗಿತ್ತು.