ಬೆಂಗಳೂರು : ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪೂರ್ವಸಿದ್ದತಾ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಮಿಷನರಿಗೆ ದೂರು ಸಲ್ಲಿಕೆಯಾಗಿದೆ.
ಖಾಸಗಿ ಶಾಲೆಗಳ ಒಕ್ಕೂಟ ಪೊಲೀಸ್ ಆಯುಕ್ತರಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದೆ.ಕಳೆದ ಸೋಮವಾರ ನಡೆದ ರಾಜ್ಯಮಟ್ಟದ ಎಸ್.ಎಸ್.ಎಲ್.ಸಿ. ಪೂರ್ವ ಸಿದ್ಧತಾ ಪರೀಕ್ಷೆಯ ವಿಜ್ಞಾನ ಪ್ರಶ್ನೆ ಪತ್ರಿಕೆ ಭಾನುವಾರ ರಾತ್ರಿಯೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಆರೋಪ ಕೇಳಿ ಬಂದಿದೆ.ಕೆಲ ಯೂಟ್ಯೂಬ್ ಚಾನೆಲ್ ಗಳಲ್ಲಿ ವಿಜ್ಞಾನ ವಿಷಯದ ಭೌತಶಾಸ್ತ್ರ ವಿಭಾಗದ ಸಂಬಂಧಿತ ಪ್ರಶ್ನೆ ಪತ್ರಿಕೆ ಎನ್ನಲಾದ ಕೆಲವು ಪ್ರತಿಗಳು ಪರೀಕ್ಷೆ ಆರಂಭಕ್ಕೆ 18 ಗಂಟೆಗಳ ಮೊದಲೇ ಹರಿದಾಡಿವೆ. ಸೋಮವಾರ ಪ್ರಶ್ನೆ ಪರೀಕ್ಷೆಯಲ್ಲಿ ನೀಡಿದ ಪ್ರಶ್ನೆ ಪತ್ರಿಕೆಯನ್ನು ಸೋರಿಕೆಯಾದ ಪ್ರಶ್ನೆ ಪತ್ರಿಕೆ ಜೊತೆ ತಾಳೆ ಹಾಕಿ ನೋಡಿದಾಗ ಎರಡು ಒಂದೇ ಆಗಿದೆ. ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ.ಹೀಗಾಗಿ ಚಳ್ಳಕೆರೆ ಸೇರಿದಂತೆ ವಿವಿಧ ಭಾಗದ ಕೆಲವು ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಗಮನಕ್ಕೆ ಈ ವಿಷಯ ತಂದಿದ್ದಾರೆ. ಇದು ಖಾಸಗಿ ಶಾಲಾ ಸಂಘಟನೆಗಳಿಗೆ ತಲುಪಿದ್ದು, ಕ್ಯಾಮ್ಸ್, ಅವರ್ಸ್ ಸ್ಕೂಲ್ ಪ್ರತಿನಿಧಿಗಳು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಪರೀಕ್ಷೆ ಮುನ್ನ ದಿನವೇ ಸೋರಿಕೆಯಾಗಿದ್ದು, ಪರೀಕ್ಷಾ ಮಂಡಳಿ ತನಿಖೆ ನಡೆಸಬೇಕೆಂದು ಖಾsಸಗಿ ಶಾಲೆಗಳು ಒತ್ತಾಯಿಸಿವೆ. ಸೋಮವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5:15 ರವರೆಗೆ ಎಸ್ಎಸ್ಎಲ್ಸಿ ವಿಜ್ಞಾನ ಪೂರ್ವ ಸಿದ್ಧತಾ ರಾಜ್ಯ ಮಟ್ಟದ ಪರೀಕ್ಷೆ ನಿಗದಿಯಾಗಿತ್ತು. ಭಾನುವಾರ ರಾತ್ರಿಯೇ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂದು ಹೇಳಲಾಗಿದೆ.