ಡೆಹ್ರಾಡೂನ್: ಉತ್ತರಾಖಂಡದ ಕೋಟ್‌ದ್ವಾರದ ರೈತನ ಮಗ ರೋಹಿತ್ ನೇಗಿಗೆ ಬಹುರಾಷ್ಟ್ರೀಯ ಕಂಪನಿ ಉಬರ್‌ನಿಂದ 2.5 ಕೋಟಿ ರೂ. ಮೊತ್ತದ ಉದ್ಯೋಗ ಆಫರ್ ಬಂದಿದೆ.
22 ವರ್ಷದ ರೋಹಿತ್ ಇಂಜಿನಿಯರಿಂಗ್ ನಲ್ಲಿ ತನ್ನ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಇದೀಗ ಉಬರ್ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಉದ್ಯೋಗ ದೊರೆತಿದ್ದು, ಭರ್ಜರಿ ಆಫರ್ ನೀಡಲಾಗಿದೆ.
ಉಬರ್ ಸಂಸ್ಥೆಯಲ್ಲಿ ಇಷ್ಟು ದೊಡ್ಡ ಮೊತ್ತದ ಉದ್ಯೋಗ ದೊರೆತಿದ್ದಕ್ಕೆ ರೋಹಿತ್, ಹಾಗೂ ಕುಟುಂಬ ಸಂತಸ ವ್ಯಕ್ತಪಡಿಸಿದ್ದಾರೆ. ಕೆಳ ಮಧ್ಯಮವರ್ಗದ ಕುಟುಂಬದಿಂದ ಬಂದಿರುವ ಇವರ ಕುಟುಂಬದ ಮಾಸಿಕ ವೆಚ್ಚವು 10,000 ರೂ.ಗಳಿಗಿಂತ ಕಡಿಮೆಯಿದೆ. ರೋಹಿತ್ ತಂದೆ ಕೃಷಿಕರಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ತಂಗಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹಾಗಂತ ರೋಹಿತ್ ನಡೆದು ಬಂದಿದ್ದ ಹಾದಿ ಅಷ್ಟು ಸುಗಮವಾಗಿರಲಿಲ್ಲ. ಅವರು ತರಗತಿಯಲ್ಲಿ ಹೆಚ್ಚು ಅಧ್ಯಯನಶೀಲ ವಿದ್ಯಾರ್ಥಿಯಾಗಿರಲಿಲ್ಲ. ಶಾಲೆ ಮತ್ತು ಕಾಲೇಜು ಸಮಯದಲ್ಲಿ ಸರಾಸರಿ ಅಂಕ ಗಳಿಸಿದ್ದರು. ಪದವಿಯ ನಂತರ ಉದ್ಯೋಗ ಪಡೆಯಲು ಸಹ ಕಷ್ಟಪಡುತ್ತಿದ್ದರು. ಆದರೂ ಹಠ ಬಿಡದ ರೋಹಿತ್ ಕಷ್ಟಪಟ್ಟು ಅಧ್ಯಯನ ಮಾಡಿದ್ದಾರೆ.
ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್ (ಗೇಟ್) ನಲ್ಲಿ ಉತ್ತಮ ಶ್ರೇಣಿಯನ್ನು ಗಳಿಸಿದ್ದಾರೆ. 2020 ರಲ್ಲಿ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳು ಗೇಟ್‌ಗೆ ಹಾಜರಾಗಿದ್ದರು. ಇದರಲ್ಲಿ ರೋಹಿತ್ 202ನೇ ರ್ಯಾಂಕ್ ಗಳಿಸಿದ್ದಾರೆ. ಈ ಉತ್ತಮ ಶ್ರೇಯಾಂಕದಿಂದಾಗಿ ಅವರು ಎಂ.ಟೆಕ್‌ಗಾಗಿ ಐಐಟಿ ಗುವಾಹಟಿಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾದ್ರು.
ರೋಹಿತ್ ಅವರ ಯಶೋಗಾಥೆಯು ನಮಗೆಲ್ಲರಿಗೂ ಸ್ಪೂರ್ತಿಯಾಗಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಫಲವಿದೆ ಅನ್ನೋದನ್ನು ರೋಹಿತ್ ಸಾಬೀತುಪಡಿಸಿದ್ದಾರೆ.