ಬೆಂಗಳೂರು : ನಟ ಧ್ರುವ ಸರ್ಜಾ ಜಿಮ್ ಟ್ರೈನರ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ವಿಚಾರಣೆ ವೇಳೆ ಅಸಲಿ ಸತ್ಯ ಬಯಲಾಗಿದೆ.
ನಟ ಧ್ರುವ ಸರ್ಜಾ ಜೊತೆ ಹತ್ತಿರವಾಗಿದ್ದಕ್ಕೆ ಪ್ರಶಾಂತ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಹೌದು, ಧ್ರುವ ಸರ್ಜಾ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ನಾಗೇಂದ್ರ ಎಂಬುವವರು ಧ್ರುವ ಸರ್ಜಾರ ಆಪ್ತರಾಗಿದ್ದರು. ಆದರೆ ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಧ್ರುವ ಸರ್ಜಾಗೆ ಹತ್ತಿರವಾಗುತ್ತಿರುವುದನ್ನು ಸಹಿಸದ ನಾಗೇಂದ್ರ ಹರ್ಷ, ಸುಭಾಷ್ ಎಂಬುವವರಿಂದ ಹಲ್ಲೆ ನಡೆಸಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ನಟ ಧ್ರುವ ಸರ್ಜಾ ಜಿಮ್ ಟ್ರೈನರ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ಬನಶಂಕರಿಯ ಕೆ ಆರ್ ರಸ್ತೆಯಲ್ಲಿ ನಡೆದಿತ್ತು. ರಾತ್ರಿ ಬೈಕ್ ನಲ್ಲಿ ಬಂದ ಹರ್ಷ, ಸುಭಾಷ್ ನಟ ಧ್ರುವ ಸರ್ಜಾ ಜಿಮ್ ಟ್ರೈನರ್ ಪ್ರಶಾಂತ್ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯಾದಾಗ ದೂರು ನೀಡಲು ಪ್ರಶಾಂತ್ ಹಿಂದೇಟು ಹಾಕಿದ್ದರು. ಮೇ 26 ರಂದು ಈ ಘಟನೆ ನಡೆದಿದ್ದು, ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.