ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಗೆ ಸದ್ಯಕ್ಕೆ ಜೈಲೂಟವೇ ಗತಿಯಾಗಿದ್ದು, ನಟ ದರ್ಶನ್ ರಿಟ್ ಅರ್ಜಿಯನ್ನು ಜುಲೈ 18 ಕ್ಕೆ ಹೈಕೋರ್ಟ್ ಮುಂದೂಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ನಟ ದರ್ಶನ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು. ಮನೆಯಿಂದ ಊಟ, ಹಾಸಿಗೆ. ಪುಸ್ತಕ ತರಿಸಿಕೊಳ್ಳಲು ಅನುಮತಿ ನೀಡುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ನಟ ದರ್ಶನ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಈ ಸಂಬಂಧ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಪೀಠದಲ್ಲಿ ಬುಧವಾರ ವಿಚಾರಣೆ ನಡೆದಿದೆ. ಈ ಪ್ರಕರಣವನ್ನು ಇತರ ಪ್ರಕರಣಗಳಂತೆಯೇ ಪರಿಗಣಿಸಲಾಗುವುದು’ ಎಂದು ನ್ಯಾ. ಕೃಷ್ಣಕುಮಾರ್ ಹೇಳಿದ್ದಾರೆ. ಈ ಸಂಬಂಧ ಹಿರಿಯ ವಕೀಲ ಕೆ.ಎನ್. ಫಣೀಂದ್ರ ವಾದ ಮಾಡಿದ್ದಾರೆ. ‘ಜೈಲು ನಿಯಮಾವಳಿಗಳಲ್ಲಿ ಮನೆ ಊಟಕ್ಕೆ ಅವಕಾಶವಿದೆ. ಆದರೆ ದರ್ಶನ್‌ಗೆ ಮನೆ ಊಟದ ಅವಕಾಶ ನೀಡಿಲ್ಲ’ ಎಂದು ವಾದ ಮಂಡಿಸಿದ್ದಾರೆ. ಬೇರೆ ಪ್ರಕರಣಗಳಂತೆಯೇ ಇದನ್ನೂ ಪರಿಗಣಿಸಲಾಗುವುದು. ಕಾನೂನಿನ ಅನುಸಾರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ನ್ಯಾಯಮೂರ್ತಿ ಕೃಷ್ಣಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಸದ್ಯ ತನಿಖಾಧಿಕಾರಿಗಳು, ಜೈಲು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ವಿಚಾರಣೆಯನ್ನು ಜುಲೈ 18ಕ್ಕೆ ಮುಂದೂಡಲಾಗಿದೆ.