ಹೈದರಾಬಾದ್ : ನಟ ‘ಅಲ್ಲು ಅರ್ಜುನ್’ ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಜಾಮೀನು ನೀಡಿ ನಾಂಪಲ್ಲಿ ಕೋರ್ಟ್ ಆದೇಶ ಹೊರಡಿಸಿದೆ. ಸಂಧ್ಯಾ ಥಿಯೇಟರ್ ನಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಜಾಮೀನು ಅರ್ಜಿ ವಿಚಾರಣೆ ಇಂದು ನಡೆದಿದ್ದು, ನಾಂಪಲ್ಲಿ ಕೋರ್ಟ್ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಅಲ್ಲು ಅರ್ಜುನ್ ವಕೀಲರು ರೆಗ್ಯೂಲರ್ ಬೇಲ್ ಗಾಗಿಯೇ ವಾದ ಮಂಡಿಸಿದ್ದರು. ಅಲ್ಲು ಅರ್ಜುನ್ ರೆಗ್ಯೂಲರ್ ಬೇಲ್ ಅರ್ಜಿಯ ತೀರ್ಪನ್ನ ಇಂದು ನಾಂಪಲ್ಲಿ ಕೋರ್ಟ್ ಪ್ರಕಟಿಸಿದೆ.
ಅಲ್ಲು ಅರ್ಜುನ್ ಬಂಧನವಾದ ದಿನವೇ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಮಧ್ಯಂತರ ಜಾಮೀನು ಪಡೆಯಲಾಗಿತ್ತು. ಅಂತೆಯೇ ನಾಂಪಲ್ಲಿ ಕೋರ್ಟ್ ನಲ್ಲಿ ಸಹ ಅರ್ಜಿ ಹಾಕಲಾಗಿತ್ತು. ಈ ಆದೇಶವನ್ನು ಕೋರ್ಟ್ ಇಂದಿಗೆ (ಜ.3) ಕ್ಕೆ ಕಾಯ್ದಿರಿಸಿತ್ತು.
ಪುಷ್ಪ 2 ಚಿತ್ರದ ಪ್ರೀಮಿಯರ್ ಪ್ರದರ್ಶನದ ವೇಳೆ ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ಕಾಲ್ತುಳಿತ ಸಂಭವಿಸಿ ರೇವತಿ (39)ಎಂಬ ಮಹಿಳೆ ಸಾವನ್ನಪ್ಪಿದ್ದರು. ಪ್ರಕರಣ ಸಂಬಂಧ ಥಿಯೆಟರ್ ಮಾಲೀಕ, ಇಬ್ಬರು ವ್ಯವಸ್ಥಾಪಕರು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಅವರನ್ನು ಕೂಡ ಇಂದು ಚಿಕ್ಕಡಪಲ್ಲಿ ಠಾಣೆ ಪೊಲೀಸರು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದರು. ನಾಂಪಲ್ಲಿ ಕೋರ್ಟ್ ನಟ ಅಲ್ಲು ಅರ್ಜುನ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿತ್ತು.ನಂತರ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.
ಇತ್ತೀಚೆಗೆ ಅಲ್ಲು ಅರ್ಜುನ್ ಮತ್ತು ಪುಷ್ಪ 2 ನಿರ್ಮಾಪಕರು ಮೃತಪಟ್ಟ ಮಹಿಳೆ ರೇವತಿ ಕುಟುಂಬಕ್ಕೆ 2 ಕೋಟಿ ರೂ.ಗಳ ಪರಿಹಾರವನ್ನು ಘೋಷಿಸಿದರು. ಅಲ್ಲು ಅರ್ಜುನ್ 1 ಕೋಟಿ ರೂ., ಮೈತ್ರಿ ಮೂವೀಸ್ ಮತ್ತು ನಿರ್ದೇಶಕ ಸುಕುಮಾರ್ ತಲಾ 50 ಲಕ್ಷ ರೂ. ಚಲನಚಿತ್ರ ನಿರ್ಮಾಪಕ ಮತ್ತು ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷ ದಿಲ್ ರಾಜು ಅವರು ಪರಿಹಾರವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.