ಯಾದಗಿರಿ : ಸೋಶಿಯಲ್ ಮೀಡಿಯಾದಲ್ಲಿ ಪ್ರಧಾನಿ ಮೋದಿಗೆ ಖಡ್ಗ ತೋರಿಸಿ ಕೊಲೆ ಬೆದರಿಕೆ ಹಾಕಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸುರಪುರದ ಮೊಹಮದ್ ರಸೂಲ್ ಎಂಬಾತ ತಲ್ವಾರ್ ಹಿಡಿದು ಬೆದರಿಕೆ ಹಾಕಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕುಡಿದ ಅಮಲಿನಲ್ಲಿ ಬೆದರಿಕೆ ಹಾಕಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರಧಾನಿ ಮೋದಿ ನಿನ್ನ ದೇಹದ ನರ ಕಟ್ ಮಾಡುತ್ತೇನೆ ಎಂದು ಸುರಪುರದ ಮೊಹಮದ್ ರಸೂಲ್ ಎಂಬಾತ ತಲ್ವಾರ್ ಹಿಡಿದು ಬೆದರಿಕೆ ಹಾಕಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು.
ಪ್ರಧಾನಿ ಮೋದಿ ಅಲ್ಲದೇ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಬಗ್ಗೆ ಸೆಲ್ಫಿ ವಿಡಿಯೋ ಮಾಡಿದ ರಸೂಲ್ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ. ಮೋದಿ ಆಡಳಿತ ಸರಿಯಾಗಿ ಮಾಡುತ್ತಿಲ್ಲ, ಸುಮ್ಮನೆ ಕಾಂಗ್ರೆಸ್ ಗೆ ಬೈಯಬೇಡ, ಪಾರ್ಟಿ ಬಿಟ್ಟು ನನ್ನ ಜೊತೆ ಜಗಳಕ್ಕೆ ಬಾ ಎಂದು ಬಾಯಿಗೆ ಬಂದ ಹಾಗೆ ನಿಂದಿಸಿದ್ದನು. ಈ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಮಹಮದ್ ರಸೂಲ್ ವಿರುದ್ಧ ಕೊಲೆ ಬೆದರಿಕೆ, ನಿಂದನೆ ಹಾಗೂ ಸಶಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.