ಭೋಪಾಲ್ : ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಗ್ರಾಮವೊಂದರ ಬಳಿ ಸೋಮವಾರ ಸಂಜೆ ಆಕಸ್ಮಿಕವಾಗಿ ಕೊಳವೆಬಾವಿಗೆ ಬಿದ್ದ ಮೂರು ವರ್ಷದ ಬಾಲಕಿಯನ್ನು ಮೇಲಕ್ಕೆತ್ತಲಾಗಿತ್ತು, ಆದರೆ ಕೆಲವೇ ಗಂಟೆಗಳ ನಂತರ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.
ಜಿಲ್ಲಾ ಕೇಂದ್ರದಿಂದ 40 ಕಿ.ಮೀ ದೂರದಲ್ಲಿರುವ ಕಸರ್ ಗ್ರಾಮದ ಬಳಿ ಸಂಜೆ 5 ಗಂಟೆ ಸುಮಾರಿಗೆ ಕೃಷಿ ಜಮೀನಿನಲ್ಲಿ ಆಟವಾಡುತ್ತಿದ್ದಾಗ ಪಿಂಟು ಸಾಹು ಎಂಬವರ ಪುತ್ರಿ ಸೌಮ್ಯ ಕೊಳವೆ ಬಾವಿಗೆ ಬಿದ್ದಿದ್ದಳು. ನಂತರ ರಕ್ಷಣಾ ಕಾರ್ಯಾಚರಣೆ ಮೂಲಕ ಬಾಲಕಿಯನ್ನು ಹೊರ ತೆಗೆಯಲಾಗಿತ್ತು.
ಕೊಳವೆ ಬಾವಿ 250 ಅಡಿಗೂ ಹೆಚ್ಚು ಆಳವಿದ್ದು, ಬಾಲಕಿ 25 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಳು.ರಕ್ಷಣಾ ಸಿಬ್ಬಂದಿ ತಕ್ಷಣ ಬಾಲಕಿಯನ್ನು ಹೊರತೆಗೆಯಲು ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಮತ್ತು ಐದೂವರೆ ಗಂಟೆಗಳ ಪ್ರಯತ್ನದ ನಂತರ ಅವಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ಆಸ್ಪತ್ರೆಯಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು.