ಉದ್ಯಮಿಗೆ 5 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿ ‘ಅಭಿನವ ಹಾಲಶ್ರೀ’ ಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಒಡಿಶಾ ಕಟಕ್ ನಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಸ್ವಾಮೀಜಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಉದ್ಯಮಿಗೆ 5 ಕೋಟಿ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಸಿಬಿ ಅಭಿನವ ಹಾಲಶ್ರೀ ಬಂಧನಕ್ಕೆ ಬಲೆ ಬೀಸಿತ್ತು. ಒಡಿಶಾ ಕಟಕ್ ನಲ್ಲಿ ಶೋಧ ನಡೆಸಿದ ಸಿಸಿಬಿ ಪೊಲೀಸರು ಮೂರನೇ ಆರೋಪಿ ‘ಅಭಿನವ ಹಾಲಶ್ರೀ’ ಯನ್ನು ಬಂಧಿಸಿದ್ದಾರೆ. ಇಂದು ಸಂಜೆ ಬೆಂಗಳೂರಿಗೆ ಕರೆ ತರುವ ಸಾಧ್ಯತೆಯಿದೆ.
ಅಭಿನವ ಹಾಲಶ್ರೀ’ ಸ್ವಾಮೀಜಿ ಮೈಸೂರಿನಲ್ಲಿ ಕಾರು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದರು. ಪೊಲೀಸರ ಕಣ್ಣಿಗೆ ಮಣ್ಣೆರಚಲು ಕಾರಿನ ನಂಬರ್ ಪ್ಲೇಟ್ ತೆಗೆದು ಪ್ರಯಾಣಿಸಿದ್ದರು. ಬಳಿಕ ಒಡಿಶಾದಲ್ಲಿ ತಲೆಮರೆಸಿಕೊಂಡಿದ್ದರು.
ಉದ್ಯಮಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ಚೈತ್ರಾ ಕುಂದಾಪುರ ಹಾಗೂ ಗ್ಯಾಂಗ್ 5 ಕೋಟಿ ವಂಚನೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಅಭಿನವ ಹಾಲಶ್ರೀ ಸ್ವಾಮೀಜಿ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದರು. ನಿರೀಕ್ಷಣಾ ಜಾಮೀನಿಗಾಗಿ ಹಾಲಶ್ರೀ ಪರ ವಕೀಲರು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿದೆ.
ಸ್ವಾಮೀಜಿಗಳು ಸಿಕ್ಕಿಹಾಕಿಕೊಂಡರೆ ದೊಡ್ಡ ದೊಡ್ಡವರ ಹೆಸರು ಬಯಲಾಗುತ್ತದೆ ಎಂದು ಚೈತ್ರಾ ಕುಂದಾಪುರ ಇತ್ತೀಚೆಗೆ ಸ್ಪೋಟಕ ಹೇಳಿಕೆ ನೀಡಿದ್ದರು. ಉದ್ಯಮಿಗೆ 5 ಕೋಟಿ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಸಿಬಿ ಇದೀಗ ಅಭಿನವ ಹಾಲಶ್ರೀಯನ್ನು ಬಂಧಿಸಿದ್ದು, ತನಿಖೆಯಿಂದ ಮತ್ತಷ್ಟು ಸ್ಪೋಟಕ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.