ಪಶ್ಚಿಮ ಹೊಂಡುರಾಸ್ ನ ಗ್ರಾಮವೊಂದರಲ್ಲಿ ಬುಧವಾರ ಎರಡು ಬಸ್ಸುಗಳು ಮುಖಾಮುಖಿ ಡಿಕ್ಕಿ ಹೊಡೆದಿವೆ. ಈ ಅಪಘಾತದಲ್ಲಿ 17 ಜನರು ಸಾವನ್ನಪ್ಪಿದ್ದಾರೆ ಮತ್ತು 14 ಜನರು ಗಾಯಗೊಂಡಿದ್ದಾರೆ, ಅವರಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದ ಸಮಯದಲ್ಲಿ ಎರಡೂ ಬಸ್ಸುಗಳು ಮಧ್ಯಮ ವೇಗದಲ್ಲಿ ಪ್ರಯಾಣಿಸುತ್ತಿದ್ದವು ಎಂದು ಲಾ ಮೊಂಟಾನಿಟಾದ ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಹೊಂಡುರಾಸ್ ನ 911 ತುರ್ತು ವ್ಯವಸ್ಥೆಯ ವಕ್ತಾರ ಅಲೆಕ್ಸಿಯಾ ಮೆಜಿಯಾ ಅಸೋಸಿಯೇಟೆಡ್ ಪ್ರೆಸ್ಗೆ ಮಾತನಾಡಿ, ಗಾಯಗೊಂಡವರು ಮತ್ತು ಮೃತರೆಲ್ಲರೂ ಸಣ್ಣ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು ಮತ್ತು ಹೊಂಡುರಾಸ್ ಮೂಲದವರು ಮತ್ತು ದೊಡ್ಡ ಬಸ್ ಖಾಲಿಯಾಗಿತ್ತು ಎಂದು ಹೇಳಿದರು.
ಗಾಯಗೊಂಡವರನ್ನು ವೆಸ್ಟರ್ನ್ ರೀಜನಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಹೆಲಿಕಾಪ್ಟರ್ ಮೂಲಕ ಸ್ಯಾನ್ ಪೆಡ್ರೊ ಸುಲಾ ನಗರದ ಆಸ್ಪತ್ರೆಗೆ ಕರೆದೊಯ್ಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.