ಜಮ್ತಾರಾ: ಜಾರ್ಖಂಡ್ ನ ಜಮ್ತಾರಾದಲ್ಲಿ ಬುಧವಾರ ಸಂಜೆ ಭೀಕರ ರೈಲು ಅಪಘಾತ ಸಂಭವಿಸಿದ್ದು, ಜಮ್ತಾರಾ-ಕರ್ಮತಾಂಡ್ ಪ್ರದೇಶದ ಕಲಾಜಾರಿಯಾ ಬಳಿ ರೈಲು ಹರಿದು ಸುಮಾರು 12 ಜನ ಸಾವನ್ನಪ್ಪಿದ್ದಾರೆ.
ದುರಂತ ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಂಡ ಜಮ್ತಾರಾ ಡೆಪ್ಯುಟಿ ಕಮಿಷನರ್, ಜಮ್ತಾರಾದ ಕಲಾಜಾರಿಯಾ ರೈಲ್ವೆ ನಿಲ್ದಾಣದಲ್ಲಿ ರೈಲು ಪ್ರಯಾಣಿಕರ ಮೇಲೆ ಹರಿದು ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದಿದೆ. ಸಾವಿನ ನಿಖರ ಸಂಖ್ಯೆಯನ್ನು ನಂತರ ದೃಢೀಕರಿಸಲಾಗುವುದು. ವೈದ್ಯಕೀಯ ತಂಡಗಳು ಮತ್ತು ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ ಎಂದು ತಿಳಿಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಪ್ಯಾಸೆಂಜರ್ ರೈಲೊಂದು ಜಮ್ತಾರಾದಲ್ಲಿನ ಕಲಾಜಾರಿಯಾ ರೈಲು ನಿಲ್ದಾಣದ ಮೂಲಕ ಹಾದು ಹೋಗುತ್ತಿದ್ದಾಗ ಅದರ ಲೊಕೊ ಪೈಲಟ್ ರೈಲು ಮಾರ್ಗದ ಅಂಚಿನಲ್ಲಿ ಧೂಳು ಏರುತ್ತಿರುವುದನ್ನು ಗಮನಿಸಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಭಾವಿಸಿ ರೈಲನ್ನು ನಿಲ್ಲಿಸಿದರು, ನಂತರ ಪ್ರಯಾಣಿಕರು ಇಳಿದರು.
ಅದೇ ವೇಳೆಗೆ ಸಮಾನಾಂತರ ಮಾರ್ಗದಿಂದ ಮತ್ತೊಂದು ರೈಲು ಬಂದು ಡಿಕ್ಕಿ ಹೊಡೆದಿದೆ. ಅಪಘಾತದ ಸ್ಥಳದಲ್ಲಿ ಪೊಲೀಸರು ಮತ್ತು ವೈದ್ಯಕೀಯ ತಂಡಗಳು ಇವೆ. ಮೃತದೇಹಗಳನ್ನು ಹೊರತೆಗೆಯಲಾಗುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.