ಬೆಂಗಳೂರು: ಇಂದು ಸತ್ಯಕ್ಕೆ ಜಯ ಸಿಕ್ಕಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ. ಹೈಕೋರ್ಟ್ ನಿಂದ ಬಿಡುಗಡೆಗೆ ಮಧ್ಯಂತರ ಆದೇಶ ನೀಡಿದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಅವರು, ನನ್ನನ್ನು ಒಬ್ಬ ಟೆರರಿಸ್ಟ್ ರೀತಿ ನಡೆಸಿಕೊಂಡರು ಎಂದು ಕಿಡಿ ಕಾರಿದ್ದಾರೆ.
ರಾಜಕೀಯ, ಸೈದ್ಧಾಂತಿಕವಾಗಿ ನಾನು ಟೀಕೆ ಮಾಡುತ್ತೇನೆ ಹೊರತೂ ವೈಯಕ್ತಿಕವಾಗಿ ಟೀಕೆ ಮಾಡಿಲ್ಲ. ನಾನು ಎಂದಿಗೂ ವೈಯಕ್ತಿಕವಾಗಿ ಟೀಕೆ ಮಾಡುವುದಿಲ್ಲ. ನನ್ನ ಬಗ್ಗೆ ಚಿಕ್ಕಮಗಳೂರಿನಲ್ಲಿ ಕೇಳಿ ತಿಳಿದುಕೊಳ್ಳಿ. ಡಿ.ಕೆ. ಶಿವಕುಮಾರ್ ಬಗ್ಗೆ ರಾಮನಗರ, ಕನಕಪುರದಲ್ಲಿ ಕೇಳಿ ತಿಳಿದುಕೊಳ್ಳಿ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಬೆಳಗಾವಿಯಲ್ಲಿ ಕೇಳಿ ತಿಳಿದುಕೊಳ್ಳಿ ಎಂದು ಹೇಳಿದ್ದಾರೆ.
ನಾನು ದೂರು ಕೊಟ್ಟರೂ ದಾಖಲಿಸಿಕೊಳ್ಳುತ್ತಿಲ್ಲ. ಸಾಕ್ಷಾಧಾರ ಇಲ್ಲದಿದ್ದರೂ ನನ್ನ ವಿರುದ್ಧ ಕೇಸ್ ದಾಖಲಿಸುತ್ತಾರೆ. ಸದನದಲ್ಲಿ ಏನೇ ಆಗಿದ್ದರೂ ಸಭಾಪತಿಗಳು ನೋಡಿಕೊಳ್ಳುತ್ತಾರೆ. ನಿನ್ನೆ ವಿಧಾನ ಪರಿಷತ್ ನಲ್ಲಿ ನಡೆದ ಬೆಳವಣಿಗೆ ಬಗ್ಗೆ ಸಭಾಪತಿಗಳು ಈಗಾಗಲೇ ಮಾಹಿತಿ ನೀಡಿದ್ದಾರೆ ಎಂದು ರವಿ ಹೇಳಿದ್ದಾರೆ.
ಸುಳ್ಳು ಕೇಸು ಹಾಕಿಸಿ ನನ್ನನ್ನು ಟೆರರಿಸ್ಟ್ ರೀತಿ ನೋಡಿಕೊಂಡರು. ನಿನ್ನೆ ರಾತ್ರಿ ಇಡೀ ನಿದ್ದೆ ಮಾಡದೆ ಇದ್ದಿದ್ದರಿಂದ ತಲೆ ನೋವಿದೆ. ಕೋರ್ಟ್ ಪ್ರತಿ ಸಿಕ್ಕಿದ ಬಳಿಕ ಎಲ್ಲಾ ವಿಚಾರ ಹಂಚಿಕೊಳ್ಳುತ್ತೇನೆ. ನಿನ್ನೆ ನಡೆದ ಘಟನೆಯ ಬಗ್ಗೆ ಎಲ್ಲವನ್ನು ವಿವರಿಸುತ್ತೇನೆ. ನಾನು ಸಭಾಪತಿಗಳಿಗೂ ದೂರು ಕೊಟ್ಟಿದ್ದೇನೆ. ಖಾನಾಪುರ ಠಾಣೆಗೂ ದೂರು ಕೊಟ್ಟಿದ್ದೆ. ಆದರೆ ಎಫ್ಐಆರ್ ದಾಖಲಿಸಲೇ ಇಲ್ಲ. ಇಲ್ಲೇನು ಸರ್ವಾಧಿಕಾರ ನಡೆಯುತ್ತಿದೆಯಾ? ಸಾಕ್ಷಿ ಸಮೇತ ದೂರು ಕೊಟ್ಟಿದ್ದರೂ ಕೇಸ್ ದಾಖಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.