ನವದೆಹಲಿ: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಲು ಕೇಂದ್ರ ಚುನಾವಣಾ ಸಮಿತಿ ಸಭೆ ಒಪ್ಪಿಗೆ ಸೂಚಿಸಿದೆ.
ನವದೆಹಲಿಯಲ್ಲಿ ಎಐಸಿಸಿ ಕಚೇರಿಯಲ್ಲಿ ನಡೆಯುತ್ತಿರುವ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ವಿನಯ್ ಕುಲಕರ್ಣಿ, ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ನೀಡಲಾಗಿದೆ.
ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಈ ಬಾರಿ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಿಂದ ಸಿಎಂ ಬೊಮ್ಮಾಯಿ ವಿರುದ್ಧ ಸ್ಪರ್ಧಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದರು.
ಇದೇ ವಿಚಾರವಾಗಿ ಹೈಕಮಾಂಡ್ ಜೊತೆ ಚರ್ಚಿಸಲು ವಿನಯ್ ಕುಲಕರ್ಣಿ ಇಂದು ದೆಹಲಿಗೆ ತೆರಳಿದ್ದರು. ಇದೀಗ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ವಿನಯ್ ಕುಲಕರ್ಣಿ ಸಿಎಂ ಬೊಮ್ಮಾಯಿ ವಿರುದ್ಧವೇ ಸ್ಪರ್ಧೆಗೆ ಸಮ್ಮತಿ ಸೂಚಿಸಲಾಗಿದೆ.