ಕೇರಳದಲ್ಲಿ ರೈಲು ಪ್ರಯಾಣಿಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣದಲ್ಲಿ ಬಂಧಿತನಾಗಿರುವ ಶಂಕಿತ ವ್ಯಕ್ತಿಯೇ ಪ್ರಕರಣದ ನಿಜವಾದ ಆರೋಪಿ ಎಂದು ದೃಢಪಟ್ಟಿದೆ.
ದಾಳಿ ಪ್ರಕರಣದ ಪ್ರಮುಖ ಬೆಳವಣಿಗೆಯಲ್ಲಿ, ರಾಷ್ಟ್ರ ರಾಜಧಾನಿಯ ಶಾಹೀನ್ ಬಾಗ್ ಪ್ರದೇಶದಿಂದ ನಾಪತ್ತೆಯಾದ ಯುವಕ ಮತ್ತು ಮಹಾರಾಷ್ಟ್ರದಲ್ಲಿ ಪೊಲೀಸರು ಬಂಧಿಸಿದ ಶಂಕಿತ ವ್ಯಕ್ತಿ ಒಬ್ಬರೇ ಎಂದು ದೆಹಲಿ ಪೊಲೀಸರು ಬುಧವಾರ ದೃಢಪಡಿಸಿದ್ದಾರೆ.
ತನಿಖೆ ಮುಂದುವರಿಯಲಿದ್ದು ಆರೋಪಿಗೆ ಬೇರೆ ಯಾವುದೇ ಸಂಘಟನೆಗಳೊಂದಿಗೆ ಸಂಪರ್ಕವಿದೆಯೇ ಎಂದು ಪರಿಶೀಲಿಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ದೆಹಲಿಯಿಂದ ನಾಪತ್ತೆಯಾಗಿದ್ದ ಯುವಕನಿಗಾಗಿ ಪೊಲೀಸರು ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದರು.
ಇದಕ್ಕೂ ಮುನ್ನ ಕೇರಳ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅನಿಲ್ ಕಾಂತ್ ಅವರು ರೈಲು ದಾಳಿ ಪ್ರಕರಣದಲ್ಲಿ ಶಾರುಖ್ ಸೈಫೀ ಬಂಧನದ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಶಂಕಿತನನ್ನು ಶೀಘ್ರದಲ್ಲೇ ರಾಜ್ಯಕ್ಕೆ ಕರೆತರಲಾಗುವುದು ಎಂದು ತಿಳಿಸಿದರು. ಮಂಗಳವಾರ ರಾತ್ರಿ ಮಹಾರಾಷ್ಟ್ರದ ರತ್ನಗಿರಿಯಿಂದ ಸೈಫೀಯನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಕೇಂದ್ರ ಗುಪ್ತಚರ ಬಂಧಿಸಿದೆ.
ಏತನ್ಮಧ್ಯೆ, ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಆರೋಪಿಯನ್ನು ತ್ವರಿತವಾಗಿ ಪತ್ತೆ ಮಾಡಿದ್ದಕ್ಕಾಗಿ ಮಹಾರಾಷ್ಟ್ರದ ಪೊಲೀಸರು, ರೈಲ್ವೆ ಪೊಲೀಸ್ ಪಡೆ (ಆರ್ಪಿಎಫ್) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸೇರಿದಂತೆ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ಗುಪ್ತಚರ ಮಾಹಿತಿ ಮೇರೆಗೆ ಮಹಾರಾಷ್ಟ್ರದ ರತ್ನಗಿರಿಯ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಆರೋಪಿಯನ್ನ ರತ್ನಗಿರಿ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿತ್ತು.