
ಉತ್ತರ ಪ್ರದೇಶದ ಸಚಿವ ದಾರಾ ಸಿಂಗ್ ಚೌಹಾಣ್ ಬುಧವಾರ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ದಾರಾ ಸಿಂಗ್, ವಿಧಾನಸಭೆ ಚುನಾವಣೆಗೂ ಮುನ್ನ ರಾಜೀನಾಮೆ ನೀಡಿದ ಉತ್ತರ ಪ್ರದೇಶದ ಎರಡನೇ ಸಚಿವರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಈಗ ಒಟ್ಟು ಆರು ಬಿಜೆಪಿ ಶಾಸಕರು ರಾಜೀನಾಮೆ ನೀಡಿದ್ದಾರೆ.
ಮಂಗಳವಾರ ಉತ್ತರ ಪ್ರದೇಶದ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರು ಸಂಪುಟ ಮತ್ತು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ರಾಜೀನಾಮೆ ನೀಡಿದ್ದರು. ರಾಜ್ಯದ ಇತರ ನಾಲ್ವರು ಶಾಸಕರು ಅವರನ್ನ ಅನುಸರಿಸಿ ಬಿಜೆಪಿ ತೊರೆದಿದ್ದರು. ಇಂದು ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಅರಣ್ಯ ಮತ್ತು ಪರಿಸರ ಸಚಿವರಾಗಿ ಸೇವೆ ಸಲ್ಲಿಸಿರುವ ದಾರಾ ಸಿಂಗ್ ಚೌಹಾಣ್ ಅವರ ಸರದಿ. ಹಿಂದುಳಿದ ವರ್ಗಗಳು ಮತ್ತು ದಲಿತರನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ ಅವರು ಬುಧವಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಹಿಂದುಳಿದ ವರ್ಗಗಳು, ಹಿಂದುಳಿದವರು, ದಲಿತರು, ರೈತರು ಮತ್ತು ನಿರುದ್ಯೋಗಿ ಯುವಕರ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ನನಗೆ ನೋವಾಗಿದೆ. ಇದೇ ಸಂದರ್ಭದಲ್ಲಿ ದಲಿತರು ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಯ ವಿಚಾರದಲ್ಲಿ ಸರ್ಕಾರ ಆಟವಾಡುತ್ತಿದೆ. ಹೀಗಾಗಿ ನಾನು ಉತ್ತರ ಪ್ರದೇಶ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ದಾರಾ ಸಿಂಗ್ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮುಂಬರುವ ಫೆಬ್ರವರಿಯಲ್ಲಿ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ನಡೆಯಲಿದೆ. ಇನ್ನೇನು ಚುನಾವಣೆ ಬಂದೇ ಬಿಡ್ತು ಎನ್ನುವಾಗ ದಾರಾ ಸಿಂಗ್ ಚೌಹಾಣ್ ರಾಜೀನಾಮೆ ನೀಡಿದ್ದಾರೆ. ನೆನ್ನೆ ಸ್ವಾಮಿ ಪ್ರಸಾದ್ ಮೌರ್ಯ ಅವರ ರಾಜೀನಾಮೆಯಿಂದ ಹಿನ್ನೆಡೆ ಅನುಭವಿಸಿರುವ ಆಡಳಿತರೂಢ ಸರ್ಕಾರಕ್ಕೆ ಮತ್ತೊಬ್ಬ ಶಾಸಕನ ನಿರ್ಗಮನದಿಂದ ಭಾರೀ ಆಘಾತಯಾಗಿದೆ. ಅದಲ್ಲದೇ ಮೌರ್ಯ ಅವರ ಆಪ್ತರು, ಬೆಂಬಲಿಗರು ಎಂದು ಗುರುತಿಸಿಕೊಂಡಿದ್ದ ರೋಷನ್ ಲಾಲ್ ವರ್ಮಾ, ಬ್ರಿಜೇಶ್ ಪ್ರಜಾಪತಿ, ಭಗವತಿ ಸಾಗರ್ ಮತ್ತು ವಿನಯ್ ಶಾಕ್ಯಾ ಅವರು ಕೂಡ ನೆನ್ನೆಯೆ ಬಿಜೆಪಿ ಪಕ್ಷಕ್ಕೆ ರಾಜೀನಾಮೆಯನ್ನು ಘೋಷಿಸಿದ್ದರು.