ರಷ್ಯಾ, ಪುಟ್ಟ ರಾಷ್ಟ್ರ ಉಕ್ರೇನ್ ಮೇಲೆ ಯುದ್ಧ ಆರಂಭಿಸಿ ವರ್ಷವಾಗುತ್ತ ಬಂದಿದೆ. ಈ ಮಧ್ಯೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ದಿಢೀರನೆ ಯುದ್ಧಪೀಡಿತ ಉಕ್ರೇನ್ಗೆ ಭೇಟಿ ನೀಡಿದ್ದಾರೆ. ರಾಜಧಾನಿ ಕೀವ್ಗೆ ಬಂದಿಳಿದ ದೊಡ್ಡಣ್ಣನನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸ್ವಾಗತಿಸಿದ್ರು. ಕೀವ್ನ ಬೀದಿಗಳಲ್ಲಿ ಇಬ್ಬರೂ ನಾಯಕರು ಕಾಣಿಸಿಕೊಂಡಿದ್ದು, ಅವರ ಫೋಟೋ ಮತ್ತು ವೀಡಿಯೊಗಳು ವೈರಲ್ ಆಗುತ್ತಿವೆ.
ಫೆಬ್ರವರಿ 22ರವೇಳೆಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಪೋಲೆಂಡ್ಗೆ ಭೇಟಿ ನೀಡಲಿದ್ದಾರೆ. ಅಲ್ಲಿನ ಪ್ರಧಾನಿ ಮಾಟೆಸ್ಜ್ ಮೊರಾವಿಕಿ ಅವರೊಂದಿಗೆ ಅಮೆರಿಕ ಪಡೆಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಲಿದ್ದಾರೆ. ಆದರೆ ಅದಕ್ಕೂ ಮುನ್ನ ಬೈಡೆನ್ ಉಕ್ರೇನ್ಗೆ ಭೇಟಿ ನೀಡಿರೋದು ತೀವ್ರ ಕುತೂಹಲ ಕೆರಳಿಸಿದೆ.
ಫೆಬ್ರವರಿ 24 ರಂದು ರಷ್ಯಾ, ಉಕ್ರೇನ್ ಮೇಲೆ ಯುದ್ಧ ಆರಂಭಿಸಿ ಒಂದು ವರ್ಷವಾಗಲಿದೆ. ಹಾಗಾಗಿ ಬೈಡೆನ್ ಅವರ ಭೇಟಿ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಹಿಂದೆ ಕೂಡ ಬೈಡೆನ್ ಹಾಗೂ ಝೆಲೆನ್ಸ್ಕಿ ಭೇಟಿಯಾಗಿದ್ದರು. ಆದ್ರೆ ಅಮೆರಿಕ ಅಧ್ಯಕ್ಷರು ಕೀವ್ಗೆ ವಿಸಿಟ್ ಮಾಡಿರೋದು ಇದೇ ಮೊದಲು. ಅಮೆರಿಕ ಅಧ್ಯಕ್ಷರ ಈ ಭೇಟಿಯು ರಷ್ಯಾ ಮತ್ತು ಅಂತರಾಷ್ಟ್ರೀಯ ಸಮುದಾಯಕ್ಕೆ ಸಂದೇಶ ನೀಡಿದೆ. ಅಮೆರಿಕ, ಉಕ್ರೇನ್ಗೆ ಬೆಂಬಲ ಮುಂದುವರಿಸಲಿದೆ ಎಂಬುದರ ಸಂಕೇತ ಇದು.
ಪೂರ್ವ ಉಕ್ರೇನ್ನಲ್ಲಿನ ಯುದ್ಧವು ಭೀಕರ ತಿರುವನ್ನು ಪಡೆದುಕೊಂಡಿದೆ. ರಷ್ಯಾ ನಿರಂತರವಾಗಿ ಉಕ್ರೇನಿಯನ್ ನಗರಗಳ ಮೇಲೆ ಕ್ಷಿಪಣಿಗಳೊಂದಿಗೆ ದಾಳಿ ಮಾಡುತ್ತಿದೆ. ಹೊಸ ವರ್ಷದ ಮುನ್ನಾದಿನ ಮತ್ತು ಜನವರಿ 1 ರಂದು ಕೀವ್ನಲ್ಲಿ ರಷ್ಯಾದ ಕ್ಷಿಪಣಿಗಳು ನಾಗರಿಕ ಕಟ್ಟಡಗಳು ಮತ್ತು ಮನೆಗಳನ್ನು ಹೊಡೆದುರುಳಿಸಿವೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೀವ್ನಲ್ಲಿ ಉಕ್ರೇನ್ಗೆ 500 ಮಿಲಿಯನ್ ಡಾಲರ್ ಮಿಲಿಟರಿ ಪ್ಯಾಕೇಜ್ ನೀಡುವುದಾಗಿ ತಿಳಿಸಿದ್ದಾರೆ. ಉಕ್ರೇನ್ಗೆ ಶಸ್ತ್ರಾಸ್ತ್ರಗಳ ನೆರವನ್ನೂ ನೀಡಲು ಅಮೆರಿಕ ಮುಂದಾಗಿದೆ.