ಕೆಲ ದಿನಗಳ ಕಾಲ ಸ್ಥಗಿತಗೊಂಡಿದ್ದ ರಾಜ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಈಗ ಮತ್ತೆ ಮುಂದುವರೆದಿದ್ದು, ಇದರ ಮಧ್ಯೆ ತಮ್ಮ ಮನೆಯನ್ನು ಡೆಮಾಲಿಷನ್ ಮಾಡಲು ಬಿಬಿಎಂಪಿ ಮಾರ್ಕಿಂಗ್ ಮಾಡಿರುವುದನ್ನು ಖಂಡಿಸಿ ದಂಪತಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಘಟನೆ ನಡೆದಿದೆ.
40 ಲಕ್ಷ ರೂಪಾಯಿ ಸಾಲ ಮಾಡಿ ಈ ಮನೆಯನ್ನು ಕಟ್ಟಿದ್ದೇವೆ ಎಂದು ಕಣ್ಣೀರಿಟ್ಟ ಸೋನು ಸಿಂಗ್, ಸುನಿಲ್ ಸಿಂಗ್ ದಂಪತಿ, ಈಗ ಮನೆಯನ್ನು ಒಡೆದು ಹಾಕಿದರೆ ನಮ್ಮ ಗತಿ ಏನು ಎಂದು ಪ್ರಶ್ನಿಸಿದರು. ಇಲ್ಲಿ ರಾಜ ಕಾಲುವೆ ಬರುತ್ತದೆ ಎಂಬ ವಿಚಾರವೇ ನಮಗೆ ತಿಳಿದಿರಲಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರಿನ ಕೆಆರ್ ಪುರಂ ಗಾಯತ್ರಿ ಲೇಔಟ್ ನಲ್ಲಿ ಈ ಘಟನೆ ನಡೆದಿದ್ದು, ನಾವು ಮನೆ ಕಟ್ಟುವಾಗ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆದಿದ್ದೇವೆ. ಈಗ ಇದನ್ನು ರಾಜ ಕಾಲುವೆ ಮೇಲೆ ನಿರ್ಮಿಸಲಾಗಿದೆ ಎಂದು ಒಡೆಯಲು ಬಂದರೆ ನಮ್ಮ ಗತಿ ಏನು ಎಂದು ಪ್ರಶ್ನಿಸಿದ್ದಾರೆ. ದಂಪತಿಗಳನ್ನು ಸಮಾಧಾನಿಸುವ ಕಾರ್ಯ ಮಾಡಲಾಗುತ್ತಿದ್ದು, ಆದರೆ ಯಾವುದೇ ಕಾರಣಕ್ಕೂ ನಮ್ಮ ಮನೆ ಒಡೆಯಲು ಬಿಡುವುದಿಲ್ಲ ಎಂದು ದಂಪತಿ ಹೇಳುತ್ತಿದ್ದಾರೆ. ಒಂದು ವೇಳೆ ಇದಕ್ಕೆ ಮುಂದಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾರೆ.