ಬೆಂಗಳೂರು: ಗೃಹಲಕ್ಷ್ಮೀ ಯೋಜನೆಯಲ್ಲಿ ಯಾವುದೇ ಗೊಂದಲವಿಲ್ಲ. ಬಿಪಿಎಲ್ ಕಾರ್ಡ್ ಇಲ್ಲದ ಮಹಿಳೆಯರಿಗೂ ಈ ಯೋಜನೆ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ತೆರಿಗೆ ಪಾವತಿದಾರರಿಗೆ ಗೃಹಲಕ್ಷ್ಮಿ ಯೋಜನೆ ಅನ್ವಯವಾಗುವುದಿಲ್ಲ. ಮಕ್ಕಳು ತೆರಿಗೆ ಪಾವತಿ ಮಾಡಿದರೂ ಆ ಕುಟುಂಬಕ್ಕೆ ಗೃಹ ಲಕ್ಷ್ಮಿ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪತಿ, ಪತ್ನಿ ಇಬ್ಬರಲ್ಲಿ ಒಬ್ಬರು ತೆರಿಗೆ ಪಾವತಿ ಮಾಡಿದರೆ ಯೋಜನೆ ಅನ್ವಯವಾಗುವುದಿಲ್ಲ. ಮಾತ್ರವಲ್ಲ ಅವರ ಮಕ್ಕಳು ತೆರಿಗೆ ಪಾವತಿ ಮಾಡಿದರು ಕೂಡ ಈ ಯೋಜನೆ ಅವರಿಗೆ ಅನ್ವಯವಾಗುವುದಿಲ್ಲ ಎಂದರು.
ಗೃಹಲಕ್ಷ್ಮಿ ಯೋಜನೆಗೆ ಆನ್ ಲೈನ್ ಹಾಗೂ ನಾಡಕಚೇರಿಗಳಲ್ಲಿಯೂ ಅರ್ಜಿ ಸಲ್ಲಿಸಬಹುದು. ವೋಟರ್ ಐಡಿ, ಪಾಸ್ ಬುಕ್ ಸಂಖ್ಯೆ ಬೇಡ. ಬಿಪಿಎಲ್ ಕಾರ್ಡ್ ಇಲ್ಲದ ಮಹಿಳೆಯರಿಗೂ ಗೃಹಲಕ್ಷ್ಮಿ ಯೋಜನೆಯಡಿ 2000 ಮಾಸಿಕ ಧನ ನೀಡಲಾಗುವುದು ಎಂದು ಹೇಳಿದರು.