ಕಳೆದ ವಾರದಿಂದ ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಸಿಗುತ್ತಿಲ್ಲ. ದಿನೇ ದಿನೇ ಹೆಚ್ಚಾಗುತ್ತಿರುವ ಪಾಸಿಟಿವಿಟಿ ರೇಟ್, ಜೊತೆಗೆ ಸಾವಿರಾರು ಪ್ರಕರಣಗಳು ವರದಿಯಾಗುತ್ತಿವೆ. ಇಂದು ನಗರದ ಕಾಲೇಜು ಒಂದರಲ್ಲಿ ಕೊರೋನಾ ಪತ್ತೆಯಾಗಿದ್ದು, 14 ವಿದ್ಯಾರ್ಥಿಗಳು ಸೋಂಕಿಗೆ ತುತ್ತಾಗಿದ್ದಾರೆ.
ರಾಜಾಜಿನಗರದ ಬಸವೇಶ್ವರ ಕಾಲೇಜಿನಲ್ಲಿ 14 ಜನ ವಿದ್ಯಾರ್ಥಿಗಳಿಗೆ ಪಾಸಿಟಿವ್ ವರದಿಯಾಗಿದೆ. ಕಾಲೇಜಿನಲ್ಲಿ ಕಳೆದ ಮಂಗಳವಾರ ರ್ಯಾಂಡಮ್ ಟೆಸ್ಟ್ ಮಾಡಲಾಗಿತ್ತು, ಆ ಟೆಸ್ಟ್ ನಲ್ಲಿ ಮೊದಲು ಮೂವರು ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದರಿಂದ ಎಚ್ಚೆತ್ತುಕೊಂಡು ಇನ್ನಷ್ಟು ಜನರಿಗೆ ಟೆಸ್ಟ್ ಮಾಡಿದಾಗ ಮತ್ತೆ 11 ವಿದ್ಯಾರ್ಥಿಗಳಲ್ಲಿ ಸೋಂಕು ದೃಢವಾಗಿದೆ.
ಮೊದಲು ಮೂವರು, ನಂತರ ಹನ್ನೊಂದು ಸೇರಿ ಒಟ್ಟು ಹದಿನಾಲ್ಕು ಜನರಿಗೆ ಕೋವಿಡ್ ಪಾಸಿಟಿವ್ ವರದಿಯಾಗಿದೆ. 400 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನ ಟೆಸ್ಟ್ ಗೆ ಒಳಪಡಿಸಿದಾಗ ಈ ಫಲಿತಾಂಶ ಬಂದಿದೆ. ಸಧ್ಯ ಪಾಸಿಟಿವ್ ಬಂದಿರುವ ವಿದ್ಯಾರ್ಥಿಗಳೆಲ್ಲಾ ಹೋಂ ಕ್ವಾರಂಟೈನ್ ಆಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇನ್ನುಳಿದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕಾಲೇಜಿಗೆ ಎರಡು ದಿನ ರಜೆ ಘೋಷಣೆ ಮಾಡಲಾಗಿದೆ.
ಇತ್ತ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಗು ಕೊರೋನಾ ವಕ್ಕರಿಸಿದೆ. ಠಾಣೆಯ 14 ಜನ ಪೊಲೀಸ್ ಸಿಬ್ಬಂಧಿಗಳಲ್ಲಿ ಕೊರೋನ ಸೋಂಕು ಪತ್ತೆಯಾಗಿದ್ದು, ಆಂಟಿಜನ್ ಟೆಸ್ಟ್ ವೇಳೆ ತಿಳಿದು ಬಂದಿದೆ. ಒಟ್ಟು 89 ಸಿಬ್ಬಂದಿಯಿರುವ ಠಾಣೆಯಲ್ಲಿ, 43 ಜನರನ್ನ ಟೆಸ್ಟ್ ಗೆ ಒಳಪಡಿಸಲಾಯ್ತು. ಒಬ್ಬ ಪಿಎಸ್ಐ, ಮೂವರು ಎಎಸ್ಐ ಹಾಗೂ ಹತ್ತು ಜನ ಸಿಬ್ಬಂದಿಗೆ ಕೊರೋನಾ ದೃಢವಾಗಿದೆ. ಸಧ್ಯ ಸಂಪೂರ್ಣ ಠಾಣೆಯನ್ನ ಸ್ಯಾನಿಟೈಸ್ ಮಾಡಲಾಗಿದ್ದು, ಸೋಂಕಿತ ಸಿಬ್ಬಂಧಿಗಳು ಕ್ವಾರಂಟೈನ್ ಆಗಿದ್ದಾರೆ.