ಗದಗ: ವಿಧಾನಸಭಾ ಚುನಾವಣಾ ಅಖಾಡ ಕಾವೇರಿದ್ದು, ರಾಜಕಿಯ ನಾಯಕರು ಏಟಿಗೆ ಎದುರೇಟು ಎಂಬಂತೆ ವಾಕ್ಪ್ರಹಾರ ನಡೆಸಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿಯವರನ್ನು ವಿಷದ ಹಾವಿಗೆ ಹೋಲಿಕೆ ಮಾಡಿದ್ದಾರೆ.
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸಿದ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿಯವರು ವಿಷದ ಹಾವು ಇದ್ದಂತೆ. ಹಾವಿನ ವಿಷ ಸ್ವಲ್ಪ ನೆಕ್ಕಿದರೂ ಸತ್ತು ಹೋಗ್ತಾರೆ. ಹಾಗಾಗಿ ರಾಜ್ಯಕ್ಕೆ ನುಗ್ಗಿರುವ ವಿಷದ ಹಾವನ್ನು ಹೊರಹಾಕಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಜಾರಿಗೆ ತಂದಿರುವ ಯೋಜನೆಗಳನ್ನು ಬಿಜೆಪಿಯವರು ತಮ್ಮದೆಂದು ಹೇಳುತ್ತಿದ್ದಾರೆ. ಉಚಿತ ಅಕ್ಕಿ ನೀಡಿದ್ದು ಸೋನಿಯಾ ಗಾಂಧಿಯವರು. ಆದರೆ ಬಿಜೆಪಿ ನಾಯಕರು ಪ್ರಧಾನಿ ಮೋದಿ ಸರ್ಕಾರದ್ದು ಎಂದು ಸುಳ್ಳು ಹೇಳುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಡೀ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಬದಲಾವಣೆಯ ಪರ್ವ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.