ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ಮುರುಘಾಶ್ರೀ ಡಾ.ಶಿವಮೂರ್ತಿ ಶರಣರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಮುರುಘಾ ಶ್ರೀಗಳನ್ನು ಎದೆನೋವು ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯಾವುದೇ ಮಾಹಿತಿ ನೀಡದೇ ಆರೋಪಿ ಮುರುಘಾ ಶ್ರೀಗಳನ್ನು ಆಸ್ಪತ್ರೆಗೆ ದಾಖಲಿಸಿದ್ದ ಕ್ರಮ ಪ್ರಶ್ನಿಸಿದ್ದ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ ತಕ್ಷಣ ಆರೋಪಿಯನ್ನು ಕೋರ್ಟ್ ಗೆ ಹಾಜರು ಪಡಿಸುವಂತೆ ತಾಕೀತು ಮಾಡಿತ್ತು.
ಕೋರ್ಟ್ ಸೂಚನೆ ಬೆನ್ನಲ್ಲೇ ಜೈಲಧಿಕಾರಿಗಳು ಆಸ್ಪತ್ರೆಯಿಂದ ನೇರವಾಗಿ ಶ್ರೀಗಳನ್ನು ಕೋರ್ಟ್ ಗೆ ಹಾಜರು ಪಡಿಸಿದ್ದರು. ಕೋರ್ಟ್ ಕಟಕಟೆಯಲ್ಲಿ ನ್ಯಾಯಾಧೀಶರ ಮುಂದೆ ಮುರುಘಾ ಶ್ರೀಗಳು ಕಣ್ಣೀರಿಟ್ಟ ಘಟನೆ ಕೂಡ ನಡೆದಿದೆ ಎಂದು ತಿಳಿದುಬಂದಿದೆ.
ಇದೇ ವೇಳೆ ಹೆಚ್ಚಿನ ವಿಚಾರಣೆಗಾಗಿ ಮುರುಘಾ ಶ್ರೀಗಳನ್ನು 5 ದಿನ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದು, ನ್ಯಾಯಾಲಯ ಇದೀಗ ಸೆ.5ವರೆಗೆ ಮುರುಘಾ ಶ್ರೀಗಳನ್ನು ಪೊಲೀಸ್ ಕಸ್ಟಡಿಗೆ ವಹಿಸಿ ಆದೇಶ ನೀಡಿದೆ.