ಹೊನ್ನಾವರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಲಿಕಾಪ್ಟರ್ ಲ್ಯಾಂಡ್ ಆಗಿದ್ದ ಜಾಗದ ಪಕ್ಕದಲ್ಲಿಯೇ ಬೆಂಕಿ ಅವಘಡ ಸಂಭವಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ರಾಮತೀರ್ಥ್ ಬಳಿ ನಡೆದಿದೆ.
ಎರಡು ದಿನಗಳ ಹಿಂದೆ ಡಿ.ಕೆ. ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಗೆ ರಣಹದ್ದು ಅಪ್ಪಳಿಸಿದ ಪರುಣಾಮ ಹೆಲಿಕಾಪ್ಟರ್ ಗಾಜುಗಳು ಪುಡಿ ಪುಡಿಯಾಗಿದ್ದವು.
ಪೈಲಟ್ ಸಮಯ ಪ್ರಜ್ಞೆಯಿಂದಾಗಿ ಅನಾಹುತ ಕ್ಷಣಾರ್ಧದಲ್ಲಿ ತಪ್ಪಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅವಘಡ ಸಂಭವಿಸಿದೆ.
ಡಿ.ಕೆ.ಶಿವಕುಮಾರ್ ಆಗಮಿಸಿದ್ದ ಹೆಲಿಕಾಪ್ಟರ್ ಲ್ಯಾಂಡ್ ಮಾಡಲಾಗಿದ್ದ ಜಾಗದ ಪಕ್ಕದಲ್ಲಿಯೇ ಈ ಅವಘಡ ಸಂಭವಿಸಿದೆ. ಹೆಲಿಕಾಪ್ಟರ್ ಗೆ ಸಿಗ್ನಲ್ ಕೊಡುವ ಸ್ಮೋಕ್ ಕ್ಯಾಂಡಲ್ ನಿಂದಾಗಿ ಒಣಗಿದ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.
ತಕ್ಷಣ ಅಗ್ನಿಶಾಮಕ ಸಿಬ್ಬಂದಿಗಳು ಎಚ್ಚೆತ್ತು ಬೆಂಕಿ ನಂದಿಸಿ, ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.